Saturday, February 27, 2010

ಬೊಳ್ಳೊಳ್ಳಿಮಾರು ಗುತ್ತು ಮನೆ

ಬೊಳ್ಳೊಳ್ಳಿಮಾರು ಗುತ್ತು ಪೆರ್ಮುದೆ ಗ್ರಾಮದ ಮೂರನೆಯ ಸ್ಥಾನಮಾನದ ಸುತ್ತು ಪಾಳಿಯ ಮನೆಯಗಿದ್ದು ಸಾಲಿಯಾನ ಅಂದರೆ ತಾಳಿಯನ್ ಬಳಿಯನ್ನು ಹೊಂದಿರುವವರು. ಇವರು ಹೆಚ್ಚು ಕಡಿಮೆ ೪೦ ಎಕರೆ ಮೂಲಗೇಣಿಯ ಭೂಮಿಯನ್ನು ಹೊಂದಿದ್ದು ವರ್ಷಕ್ಕೆ ಮೂರು ಬೆಳೆಯ ಜೊತೆಗೆ, ತೆಂಗು, ಕಂಗು ಬಾಳೆಗಳನ್ನು ನೆಟ್ಟು ಉತ್ತಮ ಫಸಲನ್ನು ಪಡೆಯುತ್ತಿದ್ದಾರೆ.



ಬೊಳ್ಳೊಳ್ಳಿಮಾರು ಗುತ್ತು
ಸುತ್ತು ಪಾಳಿಯ ಈ ಮನೆಯ ಪೂರ್ವ ದಿಕ್ಕಿಗೆ ಆಯಕಟ್ಟಿನ ಮೊಗಸಾಲೆ ಇದೆ.

ಮೊಗಸಾಲೆ
ಮನೆಯ ನಡು ಅಂಗಳದಲ್ಲಿ ಆಯಕಟ್ಟಿನ ದೊಡ್ಡ ತುಳಸಿ ಕಟ್ಟೆಯು "ಗುತ್ತಿನ ಮನೆ" ಎಂದು ಎತ್ತಿ ತೋರಿಸುವಂತಿದೆ. ಈ ತುಳಸಿ ಕಟ್ಟೆ ಇರುವ ಅಂಗಳಕ್ಕೂ ಕೆಲವೊಂದು ವರ್ಗದವರು ಬರಬಾರದು ಎಂಬ ಕಟ್ಟುಪಾಡು ಇದೆ.
ನಡು ಅಂಗಳ ಅಂಗಳದಲ್ಲಿ ಆಯಕಟ್ಟಿನ ತುಳಸಿ ಕಟ್ಟೆ
ಬೊಳ್ಳೊಳ್ಳಿಮಾರು ಗುತ್ತಿನ ದೈವಗಳ ಸೇವೆ ಮಾಡಲು ದೈವಗಳಿಂದ ಹಾಗೂ ಊರವರ ಸಮ್ಮುಖದಲ್ಲಿ ಗಡಿ ನೀಡಿ ಅವರನ್ನು ಮನೆಯ ಯಜಮಾನ ಎಂದು ಗುರುತಿಸುತ್ತಾರೆ. ಇಲ್ಲಿ ಗಡಿ ನೀಡಿದ ವ್ಯಕ್ತಿಗೆ "ಮಾಡ" ಎನ್ನುವ ಹೆಸರಿನಿಂದ ಕರೆಯುತ್ತಾರೆ.
ಈಗಿರುವ ಪೀಳಿಗೆಯು ಉಮ್ಮಲು ಹೆಂಗ್ಸಿನ ಸಂತಾನವಾಗಿದೆ. ಇವರ ತಮ್ಮ ಕಂಪು ಮಾಡರು ನಮ್ಮ ತಿಳುವಳಿಕೆಯ ಮೊದಲ ಮಾಡರು. ಇವರು ನಡೆಯಲು ಅಶಕ್ತರಾದ ಸಮಯದಲ್ಲೂ ಸಹ ದೈವಸ್ಥಾನಗಳಿಗೆ ಊರುಗೋಲನ್ನು ಹಿಡಿದು ಹೋಗುತ್ತಿದ್ದರಂತೆ. ಇದು ಅವರಿಗೆ ಮನೆ ಹಾಗೂ ದೈವಗಳ ಮೇಲಿರುವ ಭಕ್ತಿಯನ್ನು ತೋರಿಸುತ್ತದೆ. ಸೋಮನಾಥ ದೇವಸ್ಥಾನದಿಂದ ಜಳಕದ ಕೆರೆಗೆ ಇಳಿಯುವ ಮೆಟ್ಟಿಲನ್ನು ಇವರು ತಮ್ಮ ಕಾಲದಲ್ಲಿ ಮಾಡಿದ್ದರು. (ಇತ್ತೀಚೆಗೆ ಇದನ್ನು ಮತ್ತೆ ಕಾಂಕ್ರೀಟಿನಿಂದ ಮಾಡಲಾಗಿದೆ.)
ಇವರ ಕಾಲ ನಂತರ ಇವರ ಅಳಿಯ ರಾಮಣ್ಣ ಮಾಡರು ಗಡಿ ಹಿಡಿದಿರುತ್ತಾರೆ.
ಇವರ ನಂತರ ಸಿದ್ಧಣ್ಣ ಮಾಡರು ಗಡಿ ಹಿಡಿದಿರುತ್ತಾರೆ. ಇವರು ರಾಮಣ್ಣ ಮಾಡರಿಗೆ ಅಳಿಯರಾಗಿರುತ್ತಾರೆ. ಅಪಾರ ದೈವ ಭಕ್ತಿಯಿದ್ದಿರುವ ಇವರು ದೇಹದಲ್ಲಿ ಬಲಾಡ್ಯರಾಗಿದ್ದರು. ತಮ್ಮ ಗತ್ತಿನ ನಡೆ ನುಡಿಗಳಿಂದ ತುಂಬಾ ಹೆಸರುವಾಸಿಯಾಗಿದ್ದರು.
ಇವರ ನಂತರ ಗಡಿ ಹಿಡಿದವರು ಇವರ ತಮ್ಮ ಸಂಜೀವ ಮಾಡರು. ದೈವ ದೇವರಲ್ಲಿ ಅಪಾರ ಭಕ್ತಿ ಇದ್ದ ಇವರು ಸರಳ ಸ್ವಭಾವದವರಾಗಿದ್ದರು. ತುಂಬಾ ಮಡಿವಂತರಾಗಿದ್ದರು.
ಇವರ ಕಾಲದಲ್ಲಿಯೇ ಹೆಚ್ಚಿನ ಧಾರ್ಮಿಕ ಸೇವೆಗಳು, ದೈವಸ್ಥಾನದ ಪುನರ್ ನಿರ್ಮಾಣವು ಆಗಿತ್ತು.
ಇವರು ೨೦೦೮ ಮೇ ೧೨ ರಂದು ದೈವಾಧೀನರಾದರು.
ಬೊಳ್ಳೊಳ್ಳಿಮಾರು ಅನಾದಿಯಲ್ಲಿ ಜೈನ ಮನೆತನಕ್ಕೆ ಸೇರಿದ ಭೂಮಿ ಕಾಲ ಕ್ರಮೇಣ ಈ ಮನೆಯ ಪೂರ್ವಿಕರ ಸ್ವಾಧೀನವಾಯಿತು. ಈ ಮನೆತನಕ್ಕೆ ಕವತ್ತಾರು ಆಲಡೆಯಾಗಿದ್ದು, ಇಲ್ಲಿಯ ಕುಟುಂಬಸ್ಥರು ಸಾಲಿಯಾನ್ನ (ತಾಲಿಯನ್ನ ಬಳಿಯವರು) ಬರಿಯವರು. ಈ ಮನೆಯಲ್ಲಿ ಹಿಂದಿನಿಂದಲೂ ಅಳಿಯ ಸಂತಾನದ ಕಟ್ಟನ್ನು ಪಾಲಿಸುತ್ತಾ ಬಂದಿದ್ದಾರೆ.
ಪೆರ್ಮುದೆ ಗ್ರಾಮದಲ್ಲಿರುವ ಹೆಚ್ಚಿನ ಎಲ್ಲಾ ಮನೆಗಳು ಗೇಣಿಪಾಲಿನ ಮನೆಗಳು ಆದರೆ ಬೊಳ್ಳೊಳ್ಳಿಮಾರು ಗುತ್ತು ಮೂಲಗೇಣಿಯ ಮನೆ. ಮೊದ ಮೊದಲು ಗೇಣಿಪಾಲಿನ ಮನೆಯವರು ತಮ್ಮ ಧಣಿಗಳಿಗೆ ಸಕಾಲದಲ್ಲಿ ಗೇಣಿ ಕೊಡದಿದ್ದರೆ ವಸೂಲಿಗಾಗಿ ಅವರ ಮನೆಯ ವಸ್ತುಗಳನ್ನು ಕೊಂಡುಹೋಗುವ ಪರಿಪಾಠವಿತ್ತು. ಆ ಕಾರಣಕ್ಕಾಗಿಯೇ ಪೆರ್ಮುದೆ ಗ್ರಾಮದ ದೈವದ ಬಂಗಾರ (ಪದ್ದೆಯಿ) ಬೊಳ್ಳೊಳ್ಳಿಮಾರು ಗುತ್ತಿನಲ್ಲಿ ಇರಿಸಿದ್ದಾರೆ. ಕಾರಣ ಈ ಮನೆಯವರಿಗೆ ಗೇಣಿ ಕೊಡುವ ಭಯವಿಲ್ಲ.
ಬೇಸಾಯವನ್ನೇ ಮುಖ್ಯ ಕಸುಬಾಗಿ ತಿಳಿದಿರುವ ಇಲ್ಲಿಯ ಹಿಂದಿನ ತಲೆಮಾರು ವರ್ಷಕ್ಕೆ ೩ ಬೆಳೆಗಳನ್ನೂ ಬೆಳೆಸುತ್ತಿದ್ದರು. ಬೈಲು-ಬೆಟ್ಟುಗದ್ದೆಗಳಿಂದಲೂ ಉತ್ತಮ ಫಸಲನ್ನು ತೆಗೆಯುತ್ತಿದ್ದರು. ರಸಗೊಬ್ಬರದಬದಲು ಹಟ್ಟಿಗೊಬ್ಬರವನ್ನೇ ಹಾಕಿ ಉತ್ತಮ ಫಸಲನ್ನು ಪಡೆಯುವುದರ ಜೊತೆಗೆ ಕಷ್ಟಪಟ್ಟು ಬೆವರು ಸುರಿಸಿ ದುಡಿದುದರ ಫಲವಾಗಿ ಉತ್ತಮ ಆರೋಗ್ಯವನ್ನು ಪಡೆದಿದ್ದರು. ಕಲ್ಮಶ ರಹಿತವಾಗಿ ದೈವದೇವರ ಬಗ್ಗೆ ಭಕ್ತಿಯನ್ನಿರಿಸಿ ಗುರುಹಿರಿಯರಿಗೆ ವಿಧೇಯರಾಗಿ ನಡೆದು ಮನೆ ಬಾಗಿಲಿಗೆ ಬಂದ ಬಡ ಬಗ್ಗರಿಗೆ ಸಹಾಯ ಮಾಡಿ ಬೊಳ್ಳೊಳ್ಳಿ ಮಾರು ಗುತ್ತಿನ ಜನರು ಒಳ್ಳೆಯವರೆಂದು ಹೊಗಳಿಸಿಕೊಂಡಿದ್ದರು.
ಹಿಂದೆ ಮನೆಯ ಯಜಮಾನ ತಾನೇ ಎಲ್ಲಾ ಸಾಗುವಳಿ ನಡೆಸಿ ಮನೆಯನ್ನು ನಡೆಸುತ್ತಿದ್ದರು. ಆಗ ಎಲ್ಲರೂ ಒಂದೇ ಮನೆಯಲ್ಲಿ ವಾಸವಾಗಿದ್ದರು.
ಅನೇಕ ಒಕ್ಕಲು ಮನೆ (ಒಕ್ಕೆಲ್ದ್ ಇಲ್ಲ್) ಹೊಂದಿದ್ದ ಈ ಮನೆ ಕಾಲಕಾಲಕ್ಕೆ ಅವರಿಂದ ಸಹಾಯ ಪಡೆಯುತ್ತಿದ್ದರು. ಹಬ್ಬ ಹರಿದಿನಗಳ ಸಂದರ್ಭದಲ್ಲಿ ಒಕ್ಕಲು ಮನೆಯವರಿಗೆ ೧ ಸೇರು ಅಕ್ಕಿ ಮತ್ತು ಒಂದು ತೆಂಗಿನಕಾಯಿ ಕೊಡುವ ಪದ್ಧತಿ ಇತ್ತು.
ನಮ್ಮ ಮನೆಯ ತೆಂಕು ದಿಕ್ಕಿನಲ್ಲಿರುವ ತಿಮಾರ ಬಾಕ್ಯಾರ (ತಿಮಲಾಕ್ಯರ್) ಇದು ಮನೆಯ ಯಜಮಾನ (ಗಡಿ ಹಿಡಿದವರು) ನಿಗೆ ದೈವದ ವಿನಿಯೋಗದ ಖರ್ಚಿಗಾಗಿ ಬಿಟ್ಟ ಗದ್ದೆ. ಮಾಡರು ಸತ್ತ ನಂತರ ಅವರನ್ನು ಇದೇ ಗದ್ದೆಯಲ್ಲಿ ಸುಡಬೇಕು. ಯಜಮಾನರಲ್ಲದೆ ಅನ್ಯರನ್ನು ಈ ಗದ್ದೆಯಲ್ಲಿ ಸುಡಬಾರದು.
ನಮ್ಮ ಬೈಲುಗದ್ದೆಯ ಪೈಕಿ ಮೂಡಣಗದ್ದೆ (ಮುಡಾಯಿ)ಯನ್ನು ನಾಟಿ ಮಾಡುವ ದಿನ ಮನೆಯ ಯಜಮಾನ ನಾಟಿ ಮುಗಿಸುವವರೆಗೆ ಉಪವಾಸವಿದ್ದು, ಮುಗಿದ ಮೇಲೆ ಗದ್ದೆಯ ಮಧ್ಯ ಭಾಗದಲ್ಲಿ ತೆಂಗಿನ ಹಸಿ ಗರಿ (ಮಡಲ್) ಯಿಂದ ಹುಲಿಯ ರೂಪ ಮಾಡಿ ಅದನ್ನು ನಿಲ್ಲಿಸಿ ಅದರ ಮುಖದ ಭಾಗಕ್ಕೆ ಕಂಗಿನ ಹಾಳೆಯ (ಪಾಲೆ) ಕೊಂಬಾರ್ (ಟೊಪ್ಪಿ) ಮಾಡಿ ಇಟ್ಟು ನಾಟಿ ಮಾಡಿದವರೆಲ್ಲಾ "ಉಧೊ" "ಉಧೊ" ಎಂದು ಹೇಳಬೇಕು. ನಮ್ಮ ಮನೆಯ ಬೆಳೆಯನ್ನು ಹುಲಿಯ ರೂಪ (ಕಾಪು) ಕಾಯಬೇಕೆಂಬ ದೃಷ್ಟಿಯ ಪ್ರಾರ್ಥನೆ ಇದರಲ್ಲಿ ಅಡಗಿದೆ. ಈ ಗದ್ದೆಗೆ ಮುಟ್ಟಾದ ಹೆಂಗಸರು ಇಳಿಯಬಾರದು.
ನಮ್ಮ ಮನೆಯ ಬಾವಿಯು ಮನೆಯ ಉತ್ತರ ದಿಕ್ಕಿಗಿದೆ. ಮುಟ್ಟಾಗಿ ೫ ದಿನ ಆಗದ ಮನೆಯ ಹೆಂಗಸರು, ಆಮೆ ಸೂತಕವಿರುವ ಯಾರಾದರೂ ಹೊರಗಿನವರು, ಮತ್ತೆ ಕೆಲವೊಂದು ವರ್ಗದವರು ಈ ಬಾವಿಯನ್ನು ಮುಟ್ಟುವಾಗಿಲ್ಲ. ಒಂದು ವೇಳೆ ಇದನ್ನು ಪಾಲಿಸಿಕೊಂಡು ಬರದಿದ್ದರೆ, ಬಾವಿಯ ನೀರು ದೈವಕ್ಕೆ ನಿಷಿದ್ಧವಾಗಿ ಮನೆಯವರಿಗೆ ದೋಷ ಕಾಣಿಸಿಕೊಳ್ಳುತ್ತದೆ. ರಾತ್ರಿ ಹೊತ್ತು ಮನೆಯಲ್ಲಿ ದೀಪ ಉರಿಸಿದ ನಂತರ ಯಾರೂ ಬಾವಿಯಿಂದ ನೀರು ತೆಗೆಯಬಾರದು.
ಮನೆಯ ಬಾವಿ
ನಮ್ಮ ಮನೆಯ ದೈವ ಚಾವಡಿಯ ಒಳಗೆ ಕೆಲವೊಂದು ವರ್ಗದವರು ಬರಬಾರದು. ನವಜಾತ ಶಿಶುವನ್ನು ನೋಡಲು ಹೋದರೆ, ಆ iಗು ಹುಟ್ಟಿ ೫ ದಿನಗಳಾಗಿರದಿದ್ದರೆ ಸ್ನಾನ ಮಾಡಿಯೇ ಮನೆಯನ್ನು ಪ್ರವೇಶಿಸಬೇಕು. ಹಾಗೆಯೇ ಅಂತ್ಯ ಕ್ರಿಯೆಗೆ ಹೋದರೂ ಸ್ನಾನ ಮಾಡಿ ಬೇರೆ ಬಟ್ಟೆಯನ್ನು ಉಟ್ಟೇ ಮನೆಯನ್ನು ಪ್ರವೇಶಿಸಬೇಕು. ಮುಟ್ಟಾದ ಮನೆಯ ಹೆಂಗಸರೂ ೫ ದಿನವಾಗದೆ ದೈವದ ಚಾವಡಿಯನ್ನು ಪ್ರವೇಶಿಸುವಾಗಿಲ್ಲ. ಮನೆಯ ಹೆಂಗಸರು ಪ್ರಸವವಾದರೆ (ಹೆತ್ತರೆ) ೯ ದಿನಗಳ ನಂತರವೇ ನಮ್ಮ ಮನೆಗೆ ಬರಬೇಕು. ಅದಕ್ಕಾಗಿಯೇ ಬರಕಲದ ವ್ಯವಸ್ಥೆ ಮಾಡಲಾಗಿತ್ತು.
ನಮ್ಮ ಇಡೀ ಪೆರ್ಮುದೆ ಊರಿಗೆ ಅನ್ವಯಿಸುವಂತೆ ಬೊಳ್ಳೊಳ್ಳಿ ಮಾರುಗುತ್ತಿನ ದನದ ಹಟ್ಟಿಗೆ ಬಾಗಿಲು ಮಾಡುವಾಗಿಲ್ಲ. ಯಾಕೆಂದರೆ ಪೆರ್ಮುದೆ ಊರಿನಲ್ಲಿ ಹುಲಿಚಾಮುಂಡಿ ಪ್ರಮುಖ ದೈವವಾಗಿರುವುದರಿಂದ ಹಟ್ಟಿಯ ದನ ಕರುಗಳನ್ನು ರಕ್ಷಿಸುತ್ತದೆ. ಪಿಲಿಚಾಮುಂಡಿ ದೈವದ ರಕ್ಷಣೆ ಇರುವ ಕಾರಣ ದನಕರುಗಳನ್ನು ಕದ್ದೊಯ್ಯುವ ಕಳ್ಳರ ಭಯವೇ ಇಲ್ಲ ಇಲ್ಲಿ. ಊರಿನಲ್ಲಿ ಹುಲಿಯ ವೇಷ ಹಾಕಿ ಕುಣಿಯುದಾಗಲೀ, ಅಥವಾ ಯಾವುದೇ ಮನೋರಂಜನೆಯಲ್ಲಿ ಹುಲಿಯ ವೇಷವನ್ನು ಧರಿಸುವಾಗಿಲ್ಲ. ಇದಕ್ಕೆ ನಿದರ್ಶನವೆಂಬಂತೆ, ಈ ಹಿಂದೆ ತಿಳಿಯದೆ ಪ್ರಮಾದವಶಾತ ಹುಲಿವೇಷ ಪೆರ್ಮುದೆ ಊರಿಗೆ ಬಂದಾಗ ಹುಲಿವೇಷಧಾರಿ ರಕ್ರಕಾರಿ ಸತ್ತಿದ್ದಾನೆ ಎಂಬ ಪ್ರತೀತಿ ಇದೆ. ಕರ್ಕಾಟಕ ತಿಂಗಳಲ್ಲಿ (ಆಟಿ) ಕೆಲವು ಕಡೆ ನಲ್ಕೆಯವರು ಆಟಿ ಕಳಂಜನ ವೇಷ ಹಾಕಿ ಬರುತ್ತಾರೆ. ಆದರೆ ಪೆರ್ಮುದೆ ಊರಿನ ಮಾರಿಮಗ್ಗವನ್ನು ಪಿಲಿಚಾಂಡಿಯೇ ಹೋಗಲಾಡಿಸುತ್ತಾನೆಯಾದ ಕಾರಣ ಆಟಿಕಳಂಜ ಇಲ್ಲಿಗೆ ಬರುವಾಗಿಲ್ಲ.
ಮುಂಡಾಲು ಜಾತಿಯವರು ಈ ಊರಿನಲ್ಲಿ ಇರಬಾರದು. ಕೋಡ್ದಬ್ಬು ದೈವವು ಪೆರ್ಮುದೆ ಊರಿನಲ್ಲಿಲ್ಲ. ಆ ದೈವದ ಕರಿಯ ಗಂಧವನ್ನು ಹಾಕಿ ಈ ಊರಿಗೆ ಬರಬಾರದು. ಮಾಟ ಮಂತ್ರ ಕಳೆಯಲು ಜ್ಯೋತಿಷ್ಯರು ಮಾಡಿಕೊಟ್ಟ ತಾಯಿತವನ್ನು ಬೊಳ್ಳೊಳ್ಳಿಮಾರಿನವರು ಕಟ್ಟಬಾರದು.
ಮನೆಯ ಯಾವನೇ ಹುಡುಗ ಅಥವಾ ಹುಡುಗಿಗೆ ಮದುವೆಯಾದರೆ ನಮ್ಮ ಮನೆಯಿಂದಲೇ ದಿಬ್ಬಣ ಹೊರಡುವುದಾದರೆ ನಮ್ಮ ದೈವ ಚಾವಡಿಯ ಎದುರು ಮಾವಿನ ತೋರಣ ಕಟ್ಟಬೇಕು.
ನಾಗಬನದ ಬಳಿ ತೋಡಿನ ಬದಿಯಲ್ಲಿ ಒಂದು ಆಲದ ಮರವಿದೆ. ಅದರ ಬುಡದಲ್ಲಿ ಒಂದು ಸಣ್ಣ ಹೊಂಡವಿದೆ. ಆ ಜಾಗವನ್ನು ಅಶುದ್ಧ ಮಾಡಬಾರದು ಹಾಗೂ ಆ ಜಾಗಕ್ಕೆ ಹಾರೆ ಕತ್ತಿ, ಪಿಕ್ಕಾಸು ಹಾಕಬಾರದು. ಇದು ನಾಗಬನವನ್ನು ಹೊಸದಾಗಿ ಕಟ್ಟಿದಾಗ ನಾಗ ಪ್ರತಿಷ್ಠೆಯ ದಿನ ಪಾತ್ರಿ ನಾಗದರ್ಶನದಲ್ಲಿ ಹೇಳಿದ ವಿಷಯ. ಬನದ ಸುತ್ತಮುತ್ತ ನಾಗನ ಸಂಚಾರವಿರುವ ಕಾರಣ ತೋಟಕ್ಕೆ ಹಟ್ಟಿ ಗೊಬ್ಬರ ಕೂಡ ಹಾಕುವಾಗಿಲ್ಲ, ಬೂದಿಯನ್ನು ಹಾಕುವಾಗಿಲ್ಲ.
ಮನೆಯ ಮೊಗಸಾಲೆಯ ಎದುರು ಮಂಜಪ್ಪ ಬಾಕ್ಯರಿನ ತೆಂಕು ಮೂಲೆಯಲ್ಲಿ ಇರುವ ಈ ಅನುಗ್ರಹ ಹುತ್ತದಲ್ಲಿ ನಾಗ ಸನ್ನಿಧಾನವಿದೆ. ಆದ್ದರಿಂದ ಆ ಜಾಗದಲ್ಲಿ ಮುಟ್ಟಾದ ಹೆಂಗಸರು ಹೋಗಬಾರದು ಹಿಂದೆ "ಮಾಡರು" ಮೊಗಸಾಲೆಯಲ್ಲಿ ಕುಳಿತು ಈ ಬಾಕ್ಯರಿನ ಕಡೆ ದೃಷ್ಟಿಯನ್ನು ಇಟ್ಟು ಯಾವುದೇ ಮಾತು ಆಡಿದರೆ ಅದು ೧೦೦ ಕ್ಕೆ ೧೦೦ ಸತ್ಯವಾಗುತಿತ್ತಂತೆ.
ಅನುಗ್ರಹ ಹುತ್ತ
ಹುಲಿ ಚಾಮುಂಡಿ ದೈವಸ್ಥಾನದ ಎದುರು ಇರುವ ಕಾಯರ್ ಮರವು ಹುಲಿಚಾಮುಂಡಿಯು ತನ್ನ ವಾಹನವಾದ ಹುಲಿಯನ್ನು ಕಟ್ಟುವ ಮರ. ಇದರ ಗೆಲ್ಲನ್ನು ಕಡಿಯಬೇಕಾದ ಅನಿವಾರ್ಯತೆ ಬಂದಾಗ ಕೂಡ ದೈವಕ್ಕೆ ಕೈ ಮುಗಿದು ಪ್ರಾರ್ಥಿಸಿಯೇ ಮುಂದುವರಿಯಬೇಕು.
ಕುಟುಂಬದಲ್ಲಿ ಆಮೆಕರ ಬಂದರೆ, ದೈವ ಶುದ್ಧವಾಗಲು ಶುದ್ಧದ ಹೋಮ ಆಗಬೇಕು. ದೀಪಾವಳಿಯ ಸಂದರ್ಭ ಸೂತಕದಿಂದಾಗಿ ದೈವಗಳಿಗೆ ಹಬ್ಬ ಆಗದಿದ್ದರೆ ದೀಪಾವಳಿ ಆಗುವವರೆಗೆ ಇಲ್ಲಿ ಗಟ್ಟಿ ಅವಲಕ್ಕಿ ಮಾಡುವಾಗಿಲ್ಲ. ದೀಪಾವಳಿಯ ರಾತ್ರಿ ರಾಜನ್ ದೈವಗಳಿಗೆ ಹಬ್ಬವಾಗಿ ಅದರ ಮರುದಿನ ಪಂಜುರ್ಲಿ ದೈವಗಳಿಗೆ ಹಬ್ಬವಾಗುತ್ತದೆ. ದೀಪಾವಳಿಯ ದಿನ ಕಿನ್ನಿಗುರಿಯವರು ಬಂದು ಪಿಲಿಚಾಮುಂಡಿ ದೈವದ ಆವರಣ(ಅಂಗಣ)ದ ಹುಲ್ಲು ತೆಗೆದು ದೈವಸಾನದ ಮೂಲೆ ಮೂಲೆಗಳಿಗೆ ಮಾವಿನ ತುದಿ ಎಲೆ ಕಟ್ಟಿ ಬಲಿಯೇಂದ್ರನನ್ನು ಕರೆಯುವ ಬಲಕಿ ಮರವನ್ನು ನೆಟ್ಟು ಹೋಗಬೇಕು.
ಬಜಪೆಯ ನೆಲ್ಲಿದಡಿಗುತ್ತಿನವರು ಮತ್ತು ಬೊಳ್ಳೊಳ್ಳಿಮಾರಿನವರು ಒಂದೇ ಕುಟುಂಬಿಕರು. ಹಿಂದೆ ಈ ಕುಟುಂಬಿಕರಿಗೆ ವೃದ್ಧಿಕ್ಷಯ (ಆಮೆಕರ) ಇತ್ತು. ಬೊಳ್ಳೊಳ್ಳಿಮಾರಿನವರು ವರ್ಷಕ್ಕೆ ಒಮ್ಮೆ ಯಾದರು ನೆಲ್ಲಿದಡಿ ಗುತ್ತಿನ ನೀರು ಕುಡಿಯಬೇಕೆಂಬ ಕ್ರಮ ಇದೆ. ದೀಪಾವಳಿ ಹಬ್ಬದ ದಿನ ಬೊಳ್ಳೊಳ್ಳಿಮಾರಿನವರು ನೆಲ್ಲಿದಡಿ ಗುತ್ತಿಗೆ ಹೋಗದಿದ್ದರೆ ಗಟ್ಟಿ (ಅಕ್ಕಿಯ ತಿಂಡಿ) ಸರಿಯಾಗಿ ಬೇಯುತ್ತಿರಲಿಲ್ಲ. ಕಾಲ ಕ್ರಮೇಣ ಇದು ದೂರವಾಗಿದೆ.
ಹಿಂದಿನ ಕಾಲದಲ್ಲಿ ದೈವ ದೇವರು ಇರುವ ಮನೆಗಳಲ್ಲಿ ದೇವರಿಗೆ ಕುಟುಂಬದ ಪರವಾಗಿ ವರ್ಷಂಪ್ರತಿ ಹಣ ಸಂಗ್ರಹಿಸಿ ಅದನ್ನು ಡಬ್ಬಿಯಲ್ಲಿ ಹಾಕಿ ತುಂಬಿದ ನಂತರ ಕುಟುಂಬದ ಹಿರಿಯರು ಯಾವ ದೇವರಿಗೆ ಸಂದಾಯವಾಗಬೇಕು ಆ ದೇವರ ಸನ್ನಿಧಾನಕ್ಕೆ ಹೋಗಿ ಸಲ್ಲಿಸುತ್ತಿದ್ದರು. ಇದನ್ನು ಹುಂಡಿ (ಮುಡಿಪು) ಅಥವಾ ಪಣವು ಕಟ್ಟುವುದು ಎಂದು ಹೇಳುತ್ತಿದ್ದರು. ಇದನ್ನು ವರ್ಷಂಪ್ರತಿ ದೀಪಾವಳಿಯ ದಿನ ಕುಟುಂಬಿಕರು ಸೇರಿ ಕಟ್ಟುವ ಕ್ರಮ ಇದೆ. ಇಲ್ಲಿ ೨ ಹುಂಡಿಗಳಿದ್ದು, ದೊಡ್ಡ ಡಬ್ಬಿ ತಿರುಪತಿ ತಿಮ್ಮಪ್ಪನಿಗೆ, ಚಿಕ್ಕ ಡಬ್ಬಿ ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ಸೇರಿದ್ದು.
ಪ್ರತಿ ತಿಂಗಳ ಸಂಕ್ರಮಣದಂದು ಮಾಡರು ದೈವಸಾನದ ಬಾಗಿಲು ತೆರೆದು ಸಂಕ್ರಮಣ ಕಳೆಯುತ್ತಾರೆ. ಅಲ್ಲದೆ ಪ್ರತಿ ಶ್ರಾವಣ ಮಾಸದಲ್ಲಿ (ಸೋಣ) ನಿತ್ಯವೂ ದೈವಸಾನದ ಬಾಗಿಲು ತೆಗೆದು ದೀಪ ಇಡುವ ಕ್ರಮ ಅನಾದಿ ಕಾಲದಿಂದಲೂ ಬಂದಂತಹುದು. ಪರಿವಾರ ದೈವಗಳಿಗೆ ವರ್ಷಂಪ್ರತಿ ಮಾಡುವ ತಂಬಿಲವು ಮೇ (ಬೇಷ) ತಿಂಗಳ ಸಂಕ್ರಮಣದಂದು ನಡೆಯುತ್ತದೆ. ಧೂಮವತಿಯ ಸಾನದ ಬಾಗಿಲನ್ನು ಮನೆಯ ಗಡಿಹಿಡಿದ ಯಜಮಾನ ಮಾತ್ರ ತೆರೆದು ಒಳಗೆ ಹೋಗಬಹುದು. ದೈವಗಳಿಗೆ ಮನೆಯವನೇ ಗಡಿಹಿಡಿದು ಆರಾಧನೆಗೈಯ್ದರೆ ತುಂಬಾ ತೃಪ್ತಿ. ಒಂದು ವೇಳೆ ಗಡಿ ಹಿಡಿದವರು ಇಲ್ಲದಿದ್ದರೆ, ಮುಕ್ಕಾಲ್ದಿ ಅಥವಾ ಬ್ರಾಹ್ಮಣರು ಒಳಗೆ ಹೋಗಿ ಆರಾಧನೆಗೈಯಬಹುದು. ನಮ್ಮ ಮನೆಯಲ್ಲಿ ರಾಜನ್ ದೈವಗಳಿಗೆ ಸಂಬಂಧಪಟ್ಟ ಯಾವುದೇ ಕಾರ್ಯವು ಪೆಜತ್ತಾಯರ ನೇತೃತ್ವದಲ್ಲಿಯೇ ನಡೆಯುತ್ತದೆ. ಯಾವುದೇ ಧಾರ್ಮಿಕ ಕಾರ್ಯ ನಡೆಯುವುದಾಗಿ ಮನೆತನದ ಮನೆಗಳಿಗೆ ಹಾಗೂ ಮುಕ್ಕೋಡಿ ಮನೆಗೆ ವಿಷಯ ತಿಳಿಸುವ ಕ್ರಮ ಇದೆ. ಹಾಗೆಯೇ ಉಳಿದ ಮನೆಗಳಲ್ಲೂ ಸಹ ದೈವದ ಕಾರ್ಯವಾಗುವಾಗ ಈ ಮನೆಗೂ ತಿಳಿಸುತ್ತಾರೆ. ಮನೆಯಲ್ಲಿ ಶುಭ ಕಾರ್ಯಗಳು ಹಾಗೂ ಮನೆಯವರು ಪರ ಊರಿಗೆ ಹೋಗುವಾಗ ಚಾವಡಿಯಲ್ಲಿ ದೀಪ ಉರಿಸಿ ಪ್ರಾರ್ಥಿಸುವ ಕ್ರಮ ಇಂದಿಗೂ ಇದೆ.
ನಮ್ಮ ಮನೆಯ ಒಕ್ಕೆಲ ಮೆನೆಯಲ್ಲಿ ಯಾರಿಗಾದರೂ ಮದುವೆಯಾಗುದಾದರೆ ಮದುವೆಗೆ ಮುಂಚಿನದಿನ ಮದುವೆಯ ಹುಡುಗ ಯಾ ಹುಡುಗಿ ಮನೆಯವರೊಂದಿಗೆ ಬಂದು ಕೈ ಮುಗಿದು ಹೋಗಬೇಕು. ಈ ಸಂದರ್ಭದಲ್ಲಿ ಅವರು ಹರಿವಾಣದಲ್ಲಿ ಎಲೆ ಅಡಿಕೆ ತೆಂಗಿನಕಾಯಿ ಹಾಗೂ ಮಲ್ಲಿಗೆ ಹೂ ದೈವದ ಚಾವಡಿಯ ಹೊಸ್ತಿಲಿನಲ್ಲಿ (ತಡ್ಯ) ಇಟ್ಟು ಕೈ ಮುಗಿದು ಹೋಗಬೇಕು. ಯಜಮಾನ ಮನೆ ಎನ್ನುವ ದೃಷ್ಟಿಯಿಂದ ಹೆಸರು ಬೇಳೆ ಹಾಗೂ ಬೆಲ್ಲ ಕೊಡುತ್ತಿದ್ದರು. ಯಾಕೆಂದರೆ ಮದುವೆಯ ಲೆಕ್ಕದಲ್ಲಿ ಪಾಯಸ ಮಾಡಿ ಬಾಯಿ ಸಿಹಿ ಮಾಡಲೆಂದು ಹೀಗೆ ಮಾಡುತ್ತಿದ್ದರು.
ತುಳುವಿನ ಪುಯಿಂತೆಲ್ ತಿಂಗಳ ಹುಣ್ಣಿಮೆಯಂದು ಸೋಮನಾಥ ದೇವಸ್ಥಾನದಲ್ಲಿ ಧ್ವಜಾರೋಹಣವಾಗಿ ೪ ದಿನಗಳ ವರ್ಷಾವಧಿ ಜಾತ್ರೆಯು ನಡೆಯುತ್ತದೆ. ಧ್ವಜಾರೋಹಣ ಆದ ಮೇಲೆ ದೇವರ ಕೈಯಿಂದ ಮನೆತನದ ಮನೆಗಳಿಗೆ ಪ್ರಸಾದ ಸಿಗುತ್ತದೆ. ಅದನ್ನು ಗಡಿಹಿಡಿದವರು ಪಡೆಯುತ್ತಾರೆ. ಜಾತ್ರೆಯ ದಿನವೂ ರಾತ್ರಿ ದೇವರ ಕೈಯಿಂದ ಪ್ರಸಾದ ಸಿಗುತ್ತದೆ. ದೇವಸ್ಥಾನದ ಜಾತ್ರೆಗೆ ಸ್ವಲ್ಪ ದಿನ ಮುಂಚೆ ಜಾತ್ರೆಯ ಖರ್ಚಿಗಾಗಿ ಅಕ್ಕಿ ಹಾಗೂ ತರಕಾರಿಗಳನ್ನು ಕೊಡುತ್ತಾರೆ. ಜೊತೆಗೆ ಶಕ್ತ್ಯಾನುಸಾರ ಹಣವನ್ನು ಸಂಗ್ರಹಿಸಿ ಕೊಡುತ್ತಾರೆ. ದೇವಾಲಯದಲ್ಲಿ ನಡೆಯುವ ಯಾವುದೇ ಸಭೆಗಳಿಗೆ ಈ ಮನೆಯಿಂದ ಯಾರಾದರೂ ಹಾಜರಾಗಲೇಬೇಕು.
ಬೊಳ್ಳೊಳ್ಳಿಮಾರು ಗುತ್ತಿನ ಕುಟುಂಬಿಕರ ಪರವಾಗಿ ಊರಿನ ಜಾತ್ರೆಯ ಸಂದರ್ಭದಲ್ಲಿ ಕಟೀಲು ಶ್ರೀದುರ್ಗಾ ಪರಮೇಶ್ವರಿ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ಸೇವೆಯಾಟವು ನಡೆಯುತ್ತದೆ.
ಈ ಮನೆಯಲ್ಲಿ ಕೋಳಿಯನ್ನು ಮರಿ ಮಾಡುವ ಪದ್ಧತಿ ಇಲ್ಲ. ಇದು ಮನೆಯಲ್ಲಿ ಒಳಜಗಳವಾಗುವುದನ್ನು ತಪ್ಪಿಸಲು ಮನೆಯ ಗುರಿಕಾರ ಈ ಮನೆಯಲ್ಲಿ ಕೋಳಿ ಮರಿ ಮಾಡಬಾರದೆಂದು ಹೇಳಿದ್ದರಂತೆ. ಈ ಪದ್ಧತಿಯು ಇಂದಿಗೂ ರೂಢಿಯಲ್ಲಿದೆ.
ಬೊಳ್ಳೂಳ್ಳಿ ಮಾರು ಗುತ್ತಿನಲ್ಲಿ ನಮ್ಮ ಹಿರಿಯರ ತಿಳುವಳಿಕೆಯ ಕೆಲವು ಸತ್ಯ ಘಟನೆಗಳು:-
೧. ಹಿಂದೆ ಕಂಪ ಮಾಡರ ಯಜಮಾನಿಕೆಯ ಸಂದರ್ಭದಲ್ಲಿ ಕಾಯೆರ್ ಕಟ್ಟೆಯಲ್ಲಿ ಗಡುಪಾಡಿನ ನೇಮ ಆಗುತ್ತಿರುವಾಗ ಕಡೆಗೆ ಪಿಲಿಚಾಂಡಿ ಮಾರಿ ಓಡಿಸುವ ಸಂದರ್ಭದಲ್ಲಿ ಕೋಳಿ ಕಡಿದಾದ ಮೇಲೆ ಪಿಲಿಚಾಂಡಿ "ನನಗೆ ರಕ್ತದ ಆಹಾರ ಕಡಿಮೆಯಾಯಿ"ತೆಂದು ಹೇಳಿದಾಗ ಕಂಪ ಮಾಡರ ತಮ್ಮ ದಾಸ ಶೆಟ್ಟಿ ತನ್ನ ಕೈಯನ್ನು ಕಲ್ಲಿಗೆ ಬಡಿದು ರಕ್ತವನ್ನು ಸುರಿಸಿ ಪಿಲಿಚಾಂಡಿಯತ್ರ "ನಿನಗೆ ರಕ್ತದ ಆಹಾರ ಬೇಕಾದರೆ ಸ್ವೀಕರಿಸು" ಎಂದಿದ್ದರಂತೆ.
೨. ಹಿಂದೆ ಬಜಪೆಯ ನೆಲ್ಲಿದಡಿಗುತ್ತಿನವರಿಗೂ ಬೊಳ್ಳೊಳ್ಳಿಮಾರು ಗುತ್ತಿಗೂ ಆಮೆಕರ ಇತ್ತು. ಅಂದರೆ ಎರಡು ಕಡೆಯವರು ಒಂದೇ ಕುಟುಂಬಿಕರು ಆಗಿದ್ದರು. ಆಗ ನೆಲ್ಲಿದಡಿ ಗುತ್ತಿನಲ್ಲಿ ಆಗುವ ಎಲ್ಲಾ ಪರ್ವಗಳಿಗೂ ಬೊಳ್ಳೊಳ್ಳಿಮಾರಿನವರು ಹೋಗಬೇಕಾಗಿತ್ತು. ಒಂದು ಸಲ ದೀಪಾವಳಿ ಹಬ್ಬಕ್ಕೆ ಬೊಳ್ಳೊಳ್ಳಿಮಾರಿನವರಿಗೆ ಅವರು ತಿಳಿಸಿರಲಿಲ್ಲ. ದೀಪಾವಳಿಯ ಗಟ್ಟಿ ಅಡ್ಡೆಯನ್ನು ಅಲ್ಲಿಯ ಕುಟುಂಬಿಕರು ಎಷ್ಟೇ ಬೇಯಿಸಿದರೂ ಅದು ಬೇಯಲಿಲ್ಲ ಕಡೆಗೆ ಅಲ್ಲಿಯ ಯಜಮಾನನ ಮಾತಿನಂತೆ ಆ ಮನೆಯಿಂದ ಬೊಳ್ಳೊಳ್ಳಿಮಾರಿಗೆ ಜನ ಕಳಿಸಿದರು. ಆಗ ಚಂದು ಶೆಡ್ತಿ ಅಲ್ಲಿಗೆ ಹೋಗಿ ಗಟ್ಟಿಯನ್ನು ಬೇಯಿಸಲು ಇಟ್ಟ ಪಾತ್ರೆಯ ಬಾಯಿ ತೆರೆದು ಗಟ್ಟಿಯನ್ನು ಅಡಿಮೇಲು ಮಾಡಿ ಇಟ್ಟು ಒಲೆಗೆ ಕಟ್ಟಿಗೆ ಇಟ್ಟಾಕ್ಷಣ ಗಟ್ಟಿ ಬೇಯಿತಂತೆ. ಬೊಳ್ಳೊಳ್ಳಿಮಾರಿನವರು ಅಲ್ಲಿಗೆ ಹೋಗದಿದ್ದರೆ ಗಟ್ಟಿ ಬೇಯುತ್ತಿರಲಿಲ್ಲವಂತೆ.
೩. ಪಿಲಿ ಚಾಮುಂಡಿಗೆ ಬೊಳ್ಳೊಳ್ಳಿಮಾರು ಗುತ್ತು ಅತೀ ಪ್ರಾಮುಖ್ಯವಾದ ಮನೆಯಾಗಿದೆ. ಹಿಂದೆ ಈ ಗುತ್ತಿನ ಮನೆಯ ದನವೊಂದನ್ನು ಗುಡ್ಡೆಯಲ್ಲಿ ಮೇಯಲು ಕಟ್ಟಲಾಗಿತ್ತು. ಅದನ್ನು ತಿನ್ನಲು ಹುಲಿಯೊಂದು ಓಡಿ ಬರುತ್ತಿತ್ತು. ಆ ಹೊತ್ತಿಗೆ ಕಿನ್ನಿಗುರಿಯ ಸೋಂಪಾ ತಾಳೆ ಮರದಿಂದ ಶೇಂದಿ ತೆಗೆಯಲು ಮರಕ್ಕೆ ಏರಿದ್ದ. ಅವನು ಆ ದೃಶ್ಯವನ್ನು ಕಂಡು ಜೋರಾಗಿ "ಅದು ದನ ಬೊಳ್ಳೊಳ್ಳಿಮಾರಿನದ್ದು ಅದನ್ನು ತಿನ್ನಬೇಡ" ಎಂದನಂತೆ. ಇದನ್ನು ಕೇಳಿದ ಹುಲಿ ದನವನ್ನು ಬಿಟ್ಟು ಹೋಯಿತಂತೆ.
೪. ಕುತ್ತೆತ್ತೂರು, ಸೂರಿಂಜೆ ಗ್ರಾಮದ ಮನೆತನಗಳಲ್ಲಿ, "ಜಂತಬೆಟ್ಟು ಮಿತ್ತೋಡಿ ಬಾಳಿಕೆ" ಒಂದನೆಯ ಸ್ಥಾನಮಾನದ ಮನೆ. ಜುಮಾದಿ, ಜುಮಾದಿ ಬಂಟ ಮನೆಯ ಪ್ರಧಾನ ದ್ಯೆವವಾಗಿದೆ. ಅನಾದಿಯಲ್ಲಿ ಜೈನ ಮನೆತನಕ್ಕೆ ಸೇರಿದ ಭೂಮಿ ಕಾಲ ಕ್ರಮೇಣ ಈ ಮನೆಯ ಸ್ವಾಧೀನವಾಯಿತು. ಹಿಂದೆ ಈ ಮನೆಯಲ್ಲಿ "ಪ್ರಶ್ನೆ" ಯನ್ನು ಇಟ್ಟಾಗ, ಮನೆಯ ಬಾವಿಯೊಳಗೆ ನಿಧಿ ಇದೆ ಎಂದು ತಿಳಿದು ಬಂತು. ಇದನ್ನು ಅರಿತ ಮನೆಯವರು ಕೆಲವು ಕಾಲದ ನಂತರ ಬಾವಿಯನ್ನು ಮತ್ತೆ ಅಗೆದರು. ಅಂತೆಯೆ ಇವರಿಗೆ ಬಂಗಾರದ ಮೂರ್ತಿಯೊಂದು ಸಿಕ್ಕಿತು. ಈ ಮೂರ್ತಿಯಲ್ಲಿ ದೇವತಾ ಮನೋಭಾವನೆಯನ್ನು ಕಂಡು ದೈವಸ್ಥಾನದೊಳಗಿಟ್ಟರು. ತದ ನಂತರ ಮನೆಯವರಿಗೆ ನಾನಾ ತರಹದ ಕಷ್ಟ ಕಾರ್ಪಣ್ಯಗಳು ಕಂಡು ಬಂದ ಕಾರಣ ಮನೆಯಲ್ಲಿ ಪ್ರಶ್ನೆಯನ್ನು ಇಟ್ಟರು. ಜೈನ ಮನೆತನಕ್ಕೆ ಸೇರಿದ ಮೂರ್ತಿಯೊಂದನ್ನು ದೈವಸ್ಥಾನದೊಳಗಿಟ್ಟಿರುವ ಕಾರಣ ದೈವ ಉಗ್ರರೂಪದಲ್ಲಿದ್ದಾನೆ. ಕೂಡಲೆ ಮೂರ್ತಿಯನ್ನು ತೆಗೆದು ದೈವಸ್ಥಾನವನ್ನು ಶುದ್ಧ ಮಾಡಬೇಕು. ಅದಕ್ಕಾಗಿ ಪೂರ್ವದಲ್ಲಿ ಸಾರಮಾನ್ಯ ದೈವದ ಮಣ್ಣಿಗೆ ಸಮನಾದ ಬೊಳ್ಳೊಳ್ಳಿಮಾರು ಗುತ್ತು ಎಂಬ ಮನೆಯೊಂದಿದೆ. ಆ ಮನೆಯ ಬಾವಿಯಿಂದ ನೀರನ್ನು ತಂದು ದ್ಯೆವಸ್ಥಾನಕ್ಕೆ ಸಿಂಪಡಿಸಿದರೆ ದ್ಯೆವಸ್ಥಾನವು ಶುದ್ಧವಾಗಿ ದೋಷ ಪರಿಹಾರವಾಗುವುದೆಂದು ತಿಳಿದು ಬಂತು. ಅಂತೆಯೆ ಅವರು ದೋಷ ಪರಿಹಾರಮಾಡಿಸಿದ್ದರು. ಈ ವಿಷಯವನ್ನು ಮಿತ್ತೋಡಿ ಬಾಳಕೆಯವರು ಈಗಲು ನೆನಪಿಸಿಕೊಳ್ಳುತ್ತಿದ್ದಾರೆ.
೫. ಬೊಳ್ಳೊಳ್ಳಿಮಾರುಗುತ್ತಿನ ಸಿದ್ಧಣ್ಣ ಮಾಡರು ಅವರ ತಂಗಿ ಗಿರಿಜಾಳ ಊರಾದ ಪೇಜಾವರದ ಪಡ್ಪುವಿನಲ್ಲಿ ನಡೆಯುವ ಗುಳಿಗನ ಕೋಲಕ್ಕೆ ಹೋಗಿದ್ದರು. ಅಲ್ಲಿಯ ಗುಳಿಗ ತುಂಬಾ ಕಾರ್ನಿಕದ ದೈವ ಅದು ಬಾರಣೆ (ಆಹಾರ) ಸ್ವೀಕರಿಸುತ್ತಿರುವಾಗ ಸಿದ್ಧಣ್ಣ ಮಾಡರು "ಏನು ನಿನ್ನ ಅವತಾರ ಬೇಗ ಬಾರಣೆ ಸ್ವೀಕರಿಸು" ಎಂದರಂತೆ. ಆಗ ಗುಳಿಗ ಕಣ್ಣರಳಿಸಿ ಇವರನ್ನು ನೋಡಿದಾಗ ಇವರಿಗೆ ಶರೀರದಲ್ಲಿ ಏನೋ ಸಂಕಟ ಆದ ಅನುಭವವಾಯ್ತು. ಆಗ ಅವರು ತನ್ನ ಪಂಚೆಯ ಕೊನೆಯಿಂದ ಪಿಲಿ ಚಾಮುಂಡಿಯ ಗಂಧವನ್ನು ಹಣೆಗೆ ಹಾಕಿದಾಗ ಅವರ ಸಂಕಟ ದೂರವಾಯಿತಂತೆ.
೬. ಹಿಂದೆ ಬೊಳ್ಳೊಳ್ಳಿಮಾರುಗುತ್ತಿಗೆ ಹತ್ತಿರದಲ್ಲಿದ್ದ ಕೊಡ್ಯಂಡದ ದೈವಗಳು ಅಜೀರ್ಣಾವಸ್ಥೆಯಲ್ಲಿದ್ದವು. ಅವುಗಳಿಗೆ ಸಾನವಿರಲಿಲ. ಆಗ ಬೊಳ್ಳೊಳ್ಳಿಮಾರಿನ ತಿಮ್ಮಪ್ಪ ಹೆಗಡೆಯವರು ಕೊಡ್ಯಂಡದ ಭೂಮಿಯನ್ನು ಗೇಣಿಗಾಗಿ ಸಾಗುವಳಿ ಮಾಡುತಿದ್ದರು. ಆದರೆ ಅಲ್ಲಿ ಸಾಗುವಳಿ ಮಾಡುವವರಿಗೆ ಸುಖವಿರುತ್ತಿರಲಿಲ್ಲ. ಒಂದು ಸಲ ತಿಮ್ಮಪ್ಪ ಹೆಗಡೆಯವರ ಕೋಣ ಕೊಡ್ಯಂಡದ ಗದ್ದೆಯನ್ನು ಉಳುತ್ತಿರುವಾಗ ತನ್ನಷ್ಟಕ್ಕೆ ಬಿದ್ದು ಬಿಟ್ಟಿತು. ಜ್ಯೋತಿಷ್ಯರಲ್ಲಿ ಹೋಗಿ ಕೇಳಿದಾಗ, "ಆ ಭೂಮಿಯ ದೈವಗಳಿಗೆ ಬಾಯಿಗೆ ನೀರು ಇಲ್ಲದ ಕಾರಣ ಅವು ಕೋಪದಿಂದ ಹಾಗೆ ಮಾಡಿದ್ದು, ಇನ್ನು ಮುಂದೆ ಆ ಜಾಗದ ಸಾಗುವಳಿ ಬಿಡಬೇಕು" ಎಂದು ಹೇಳಿದ್ದರು. ಅಲ್ಲಿಯ ದೈವಗಳು ತಿಮ್ಮಪ್ಪ ಹೆಗಡೆಯವರ ಒಟ್ಟಿಗೆ ಬೊಳ್ಳೊಳ್ಳಿ ಮಾರಿಗೆ ಬಂದಿದ್ದವಂತೆ, ಆದರೆ ಪಿಲಿಚಾಮುಂಡಿ ಅವುಗಳನ್ನು ಹಿಂದಕ್ಕೆ ಓಡಿಸಿದ್ದಾನೆ ಎಂದೂ ತಿಳಿದು ಬಂದಿತ್ತು.
೭. ೧೯೬೦ ರಲ್ಲಿ ಸಿದ್ದಣ್ಣ ಮಾಡರ ಯಜಮಾನಿಕೆಯ ಸಂದರ್ಭದಲ್ಲಿ ಪಂಜುರ್ಲಿ ದೈವಗಳಿಗೆ ಆಗುವ ತಂಬಿಲದ ದಿನ ನಿಗದಿಪಡಿಸುವಲ್ಲಿ ಕುಟುಂಬಿಕರ ಮಧ್ಯೆ ಭಿನ್ನಾಭಿಪ್ರಾಯ ಮೂಡಿದಾಗ ಹುಲಿಯೊಂದು ದನದ ಅರ್ಧಭಾಗವನ್ನು ಹಿಡಿದು ಪಿಲಿಚಾಮುಂಡಿ ಸಾನದ ಎದುರು ತಂದು ಇಟ್ಟು ಹೋಯಿತಂತೆ.
೮. ಇದು ೧೯೭೦ರಲ್ಲಿ ನಡೆದ ಘಟನೆ ಆ ಹೊತ್ತಿಗೆ ಬೊಳ್ಳೊಳ್ಳಿಮಾರುಗುತ್ತಿನ ಬಾವಿಗೆ ಕಟ್ಟೆ ಇರಲಿಲ್ಲ. ಮರದ ಕಂಬಗಳನ್ನು ನೆಲಕ್ಕೆ ಊರಿ ಅದಕ್ಕೆ ರಾಟೆ ಹಾಕಿ ನೀರು ಎಳೆಯುತ್ತಿದ್ದರು. ದಂಡೆ ಇಲ್ಲದ ಕಾರಣ ನೀರು ಎಳೆಯುವಾಗ ತುಂಬಾ ಜಾಗ್ರತೆವಹಿಸ ಬೇಕಾಗಿತ್ತು. ಮೇ ತಿಂಗಳಲ್ಲಿ ಬಾವಿಯಲ್ಲಿ ನೀರು ಸ್ವಲ್ಪ ಕಡಿಮೆ ಇದ್ದ ಕಾರಣ, ಮನೆಯವರು ಬೆಳಿಗ್ಗೆ ಬೇಗನೆ ಎದ್ದು ನೀರು ತುಂಬಿಸಿಡುತ್ತಿದ್ದರು. ಹೀಗೆ ಬೆಳಿಗ್ಗೆ ನೀರು ತರಲು ಹೋದಾಗ ಒಬ್ಬರು ಮಣ್ಣು ಕುಸಿದು ಬಾವಿಗೆ ಬಿದ್ದರೂ ಪುಣ್ಯವಶಾತ್ ಅವರಿಗೆ ಸ್ವಲ್ಪವೂ ಗಾಯವಾಗದೆ ಬದುಕುಳಿದರು. ಸ್ವಲ್ಪ ದಿನದ ನಂತರ ಜ್ಯೋತಿಷ್ಯರಲ್ಲಿ ಕೇಳಿದಾಗ ಹುಲಿಚಾಮುಂಡಿ ದೈವವು ಬಿದ್ದವಳನ್ನು ತನ್ನ ಕೈಗಳಿಂದ ಹಿಡಿದು ರಕ್ಷಿಸಿತೆಂದು ತಿಳಿದು ಬಂತು.
೯. ಸಂಜೀವ ಮಾಡರಿಗೆ ಗಡಿ ಹಿಡಿಯುವ ದಿನ ರಾತ್ರಿ ಅವರ ಪತ್ನಿಯನ್ನು ಕೊಳಂಬೆಯಿಂದ ಕಾರಿನಲ್ಲಿ ಕರೆದುಕೊಂಡು ಬರುವಾಗ ಒಂದು ಗಡುಪಾಡಿನ ಜಾಗವಾದ ಥ್ಯಾಕರ್ ಕಟ್ಟೆಯ ಹತ್ತಿರ ಕಾರಿನ ಚಾಲಕ ಹಿಂದೆ ಪೆರ್ಮುದೆ ಊರಿನಲ್ಲಿ ಯಾವಾಗಲೂ ಹುಲಿ ಕಾಣಿಸಿಕೊಂಡು ದೈವ ಪಿಲಿ ಚಾಮುಂಡಿಯ ಕಾರ್ನಿಕ ತೋರುತಿತ್ತಂತೆ. ಆದರೆ ಈಗ ಕಾಲ ಬದಲಾಗಿದೆ. ಈಗ ಕಾಣ ಸಿಗಲಿಕ್ಕಿಲ್ಲ ಎಂದು ಹೇಳಿದಾಕ್ಷಣ ಮಾರ್ಗದ ಮಧ್ಯದಲ್ಲಿ ೨ ಹುಲಿಗಳು ಅತ್ತ ಇತ್ತ ಹೋದವಂತೆ.
೧೦. ೧೯೯೭ ನಡೆದ ಘಟನೆ: ಆಗಿನ ಗಡಿಹಿಡಿದವರಾದ ಸಂಜೀವ ಮಾಡರು ಹೆಚ್ಚಾಗಿ ತನ್ನ ಪತ್ನಿ ಪುತ್ರರೊಡನೆ ಪತ್ನಿಯ ಊರಾದ ಕೊಳಂಬೆಯಲ್ಲಿ ಇರುತ್ತಿದ್ದರು. ಸಂಕ್ರಮಣದ ದಿನಗಳಲ್ಲಿ ಹಾಗೂ ದೈವಗಳ ಪರ್ವದಿನಗಳಲ್ಲಿ ಹಾಗೂ ನೇಮಗಳ ದಿನಗಳಲ್ಲಿ ಇಲ್ಲಿಗೆ ಬಂದು ಹೋಗುತ್ತಿದ್ದರು. ಆರೋಗ್ಯವಂತರಾದ ಅವರು ಒಮ್ಮಿಂದೊಮ್ಮೆಗೆ ಮಾನಸಿಕ ರೋಗಿಯಂತೆ ತನ್ನ ಮೈಯನ್ನು ಪರಚಿಕೊಂಡು ಏನೇನೋ ಮಾತಾಡಿ ಹುಲಿ ಕಾಣಿಸುತ್ತಿದೆ ಎಂದು ಬೊಬ್ಬೆ ಹಾಕಿದಾಗ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ನಂತರ ಜ್ಯೋತಿಷ್ಯರಲ್ಲಿ ಕೇಳಿದಾಗ "ಸಂಜೀವ ಮಾಡರು ಬೊಳ್ಳೊಳ್ಳಿಮಾರಿನಲ್ಲಿ ಹೆಚ್ಚಾಗಿ ಇರದೆ ತನ್ನ ಹೆಂಡತಿ ಮನೆಯಲ್ಲಿಯೇ ಇರುತ್ತಾರೆ. ಆದ್ದರಿಂದ ಹುಲಿ ಚಾಮುಂಡಿ ಕೋಪವಿದೆಯೆಂದು ತೋರಿ ಬಂತು.

1 comment:

  1. idhu ondhu savi nenapu mathra........sukesh shetty from gurupur....qatar

    ReplyDelete