Saturday, February 27, 2010

ಊರಿನ ದೈವಸ್ಥಾನ

ಪಾರಾಳೆಗುತ್ತು ಪಾಲೆದಡಿ ಸ್ಥಾನದಲ್ಲಿ ಅಂದರೆ ಎತ್ತರವಾದ ಹಾಳೆಯ ಮರದ ಅಡಿಯಲ್ಲಿ ಐವರು ಸತ್ಯಗಳಿಗೆ ಪ್ರತಿವರ್ಷ ತುಳುವಿನ "ಮಾಯಿ" ತಿಂಗಳ ಹುಣ್ಣಿಮೆಯಂದು ಧ್ವಜಾರೋಹಣವಾಗಿ ೪ ದಿನಗಳ ಜಾತ್ರೆ ನಡೆಯುತ್ತದೆ. ಎತ್ತರವಾದ ಹಾಳೆಮರದ ಅಡಿಯಲ್ಲಿ ದೈವಗಳು ನರ್ತನ ಸೇವೆಯನ್ನು ಸ್ವೀಕರಿಸುತ್ತದೆ. ಇಲ್ಲಿ ಪ್ರತಿವರ್ಷ ದೈವದ ಹೆಸರಿನಲ್ಲಿ ಕಂಬಳವು ನಡೆಯುತ್ತದೆ. ಈ ಮನೆಯ ಯಜಮಾನನನ್ನು "ಚೌಟ" ಎನ್ನುವ ಹೆಸರಿನಿಂದ ಕರೆಯುತ್ತಾರೆ. ಇಲ್ಲಿ ನಡೆಯುವ ಐವರು ಸತ್ಯಗಳಿಗೆ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಗಳಿಗೂ ಗ್ರಾಮದ ೮ ಮನೆತನದ ಯಜಮಾನರೂ ಬರಲೇಬೇಕು.
ಭಂಡಾರ

ವರ್ಷಾವಧಿ ನೇಮೋತ್ಸವಕ್ಕೆ ಸ್ವಲ್ಪ ದಿನ ಮುಂಚೆ ಕೋಳಿಗೂಟ (ಕೋರಿ ಕುಂಟ) ನಡೆಯುತ್ತದೆ. ಇದು ನಡೆದ ಮೇಲೆ ನೇಮದವರೆಗೆ ಊರಿನಲ್ಲಿ ಯಾವುದೇ ಒಳ್ಳೆಯ ಕೆಲಸವಾಗಬಾರದು. ಮದುವೆ ಅಥವಾ ದೈವಗಳಿಗೆ ಸಂಬಂಧಪಟ್ಟ ಯಾವುದೇ ಕಾರ್ಯ ಮಾಡಿದರೂ ದೋಷ ಕಂಡುಬರುವುದು.
ಈ ಕೋರಿ ಕುಂಟಕ್ಕೂ, ನೇಮದ ಮುಂಚಿನ ದಿನ ನಡೆಯುವ ಚಪ್ಪರ ಹಾಕುವ ಕಾರ್ಯಕ್ಕೂ ಮನೆಯ ಯಜಮಾನ ಹೋಗಬೇಕು.
ನೇಮೋತ್ಸವದ ಮೊದಲ ದಿನ ಬೆಳಿಗ್ಗೆ ಮುಕ್ಕೋಡಿಯಲ್ಲೂ ಮತ್ತು ಪಾರಾಳ ಗುತ್ತಿನಲ್ಲೂ ಭಂಢಾರ ಏರುತ್ತದೆ. ಈ ದೃಶ್ಯ ಭಕ್ತಿರಸವನ್ನೇ ಹರಿಸುತ್ತದೆ. ಬೊಳ್ಳೊಳ್ಳಿಮಾರು ಗುತ್ತಿನ ಯಜಮಾನನು ಅಂದು ಭಂಡಾರ ಏರುವ ಹೊತ್ತಿಗೆ ಮುಕ್ಕೋಡಿಯಲ್ಲಿರಬೇಕು. ಮುಕ್ಕೋಡಿ ಮನೆಯಲ್ಲಿ ಪಿಲಿಚಾಮುಂಡಿಯನ್ನು ಉಂಡು ಮಾಡುವಾಗ (ಆವೇಶ ಬರಿಸುವಾಗ) ಬೊಳ್ಳೊಳ್ಳಿಮಾರು ಗುತ್ತಿನ ಯಜಮಾನ "ಮದು" ಹೇಳಬೇಕು. ಭಂಡಾರ ಏರಿ ಮುಕ್ಕೋಡಿಯಿಂದ ಪಾಲೆದಡಿ ಸ್ಥಾನಕ್ಕೆ ಹೋಗುವಾಗ, ಬೊಳ್ಳೊಳ್ಳಿಮಾರು ಗುತ್ತಿನ ಯಜಮಾನನು (ಮಾಡರು) ಬೆಳ್ಳಿಯ ಚಿಕ್ಕ ಹುಲಿಯ ಮೂರ್ತಿಯನ್ನು ಹಿಡಿದು ಹೋಗುವ ಪದ್ಧತಿ ಹಿಂದಿನಿಂದಲೂ ನಡೆದು ಬಂದುದು. ಒಂದು ವೇಳೆ ಗಡಿಹಿಡಿದವರು ಇಲ್ಲದಿದ್ದರೆ ಆ ಹುಲಿಯನ್ನು ಭಂಡಾರದ ಪೆಟ್ಟಿಗೆಯ ಒಳಗಿಟ್ಟು ಕೊಂಡು ಹೋಗುತ್ತಾರೆ. ಅದೇ ಹೊತ್ತಿಗೆ ಪಾರಾಳ ಗುತ್ತಿನಿಂದಲೂ ಭಂಡಾರವೇರಿ ವಿಜೃಂಭಣೆಯಿಂದ ಪಾಲೆದಡಿ ಸಾನಕ್ಕೆ ಹೋಗುತ್ತದೆ. ನಂತರ ಧ್ವಜ ಕಂಬಕ್ಕೆ ಗರುಡನನ್ನು ಏರಿಸಿ ಬೆಳಿಗ್ಗೆ ಉಲ್ಲಾಯನಿಗೆ ನೇಮೋತ್ಸವವು ನಡೆಯುತ್ತದೆ.
ಧ್ವಜ ಕಂಬಕ್ಕೆ ಏರಿಸುವ ಬೆಳ್ಳಿಯ ಗರುಡನನ್ನು ಬೊಳ್ಳೊಳ್ಳಿಮಾರು ಗುತ್ತಿನ ಶಾಂತರಾಮ ಹೆಗ್ಡೆಯವರು, ಬೊಳ್ಳೊಳ್ಳಿಮಾರುಗುತ್ತಿನ ಕುಟುಂಬಿಕರ ಹೆಸರಿನಲ್ಲಿ ಕೊಟ್ಟ ಸೇವೆಯ ನೆನಪಿಗಾಗಿ, ಉಲ್ಲಾಯನಿಗೆ ನೇಮವಾಗುವಾಗ ಬೊಳ್ಳೊಳ್ಳಿಮಾರು ಗುತ್ತಿನ ಯಜಮಾನನಿಗೆ ತುದಿ ಬಾಳೆ ಎಲೆಯಲ್ಲಿ ಪ್ರಸಾದ ಕೊಡುತ್ತಾರೆ. ಇದು ಸೂರ್ಯ ಚಂದ್ರರಿರುವವರೆಗೆ ಸಿಗಬೇಕಾದ ಮರ್ಯಾದೆ.
ಅದೇ ದಿನ ರಾತ್ರಿ ಕೊಡಮಣಿತ್ತಾಯಿಗೆ ನರ್ತನ ಸೇವೆ ನಡೆಯುತ್ತದೆ. ಎರಡನೆ ದಿನ ಕಾಂತೇರಿ ಧೂಮಾವತಿ, ಬಬ್ಬರ್ಯ, ಜಾರಂದಾಯ, ಮತ್ತು ಮರಬೂತಕ್ಕೆ ನರ್ತನ ಸೇವೆ ನಡೆಯುತ್ತದೆ.
ಮೂರನೇ ದಿನದ ನೇಮೋತ್ಸವವು ಸರಳ ಧೂಮಾವತಿಗೆ ಮತ್ತು ಬ್ರಹ್ಮನ್ ದೇವತೆಗೆ ನಡೆಯುತ್ತದೆ. ಈ ದಿನದ ನೇಮೋತ್ಸವಕ್ಕೆ ಬೊಳ್ಳೊಳ್ಳಿಮಾರು ಗುತ್ತ್ತಿನಿಂದಲೇ ತೆಂಗಿನಕಾಯಿ, ಸೀಯಾಳ, ತೆಂಗಿನಮರದ ಎಳೆತುಗರಿ (ಸಿರಿ) ಹಿಂಗಾರ ಎಲೆ ಸಂದಾಯವಾಗಬೇಕು. ಆ ದಿವಸ ಗಡಿ ಹಿಡಿದ ಬೊಳ್ಳೊಳ್ಳಿಮಾರು ಗುತ್ತಿನ ಮಾಡರು ಮಧ್ಯಾಹ್ನ ೧ಕ್ಕೆ ಊಟ ಮಾಡಿ ರಾತ್ರಿ ಫಲಾಹಾರ ಸೇವಿಸಬೇಕು. ಮಾಂಸಾಹಾರ ಸೇವಿಸಬಾರದು. ಮಾಡರು ರಾತ್ರಿ ದೈವಕ್ಕೆ ಸ್ವಸ್ತಿಕೆ (ಸುತ್ತಿಗೆ) ಇಡುವುದಕ್ಕೆ ಮೊದಲೇ ಹೋಗಬೇಕು.
ಅಂದು ರಾತ್ರಿ ಸರಳ ಧೂಮಾವತಿಗೆ ನರ್ತನ ಸೇವೆ ನಡೆದು ದೈವದ ಬದಿಕರ ಹಾಗೂ ಬ್ರಹ್ಮನ್ ದೇವತೆಯ ಪನಿವಾರವು ಬೊಳ್ಳೊಳ್ಳಿಮಾರು ಗುತ್ತಿಗೆ ಸಂದಾಯವಾಗುತ್ತದೆ. ನರ್ತನದ ನಂತರ ನರ್ತನದಲ್ಲೆ ಸಿಗುವ ಈ ಪವಿತ್ರವಾದ ಅಮೃತಕ್ಕೆ ಸಮಾನವಾದ ಪ್ರಸಾದವನ್ನು ಬೊಳ್ಳೊಳ್ಳಿಮಾರುಗುತ್ತಿನ ಯಜಮಾನರು ದೈವದ ಕೈಯಿಂದಲೇ ಸ್ವೀಕರಿಸುತ್ತಾರೆ. ಒಂದು ವೇಳೆ ಯಜಮಾನ ಇಲ್ಲದಿದ್ದರೆ ಬೊಳ್ಳೊಳ್ಳಿಮಾರು ಗುತ್ತಿನ ಯಜಮಾನನ ಪ್ರತಿನಿಧಿಯು ಸ್ವೀಕರಿಸುತ್ತಾರೆ. ನಮ್ಮ ಊರಿನಲ್ಲಿ ಯಾವ ಜಾತಿಯವನ ಮನೆಯಲ್ಲೇ ಆಗಲಿ ಸರಳ ಧೂಮಾವತಿ ನೇಮವಾದರೆ "ಬದಿಕರ" ವು ಬೊಳ್ಳೊಳ್ಳಿಮಾರಿಗೆನೇ ಸಂದಾಯವಾಗಬೇಕು.
ಸರಳ ಧೂಮಾವತಿ
ಬ್ರಹ್ಮನ್ ದೇವತೆ
ನಾಲ್ಕನೆಯ ದಿನ ವಿಜೃಂಭಣೆಯಿಂದ ಹುಲಿ ಚಾಮುಂಡಿಗೆ ನೇಮೋತ್ಸವವು ನಡೆಯುತ್ತದೆ. ರಾತ್ರಿ ನೇಮೋತ್ಸವದ ನಂತರ ಬಂಡಿ ಮತ್ತು ತೂಟೆದಾರ ನಡೆಯುತ್ತದೆ. ಅಂದು ಹುಲಿ ಚಾಮುಂಡಿಯ ಯಾವುದೇ ಆಯ-ನ್ಯಾಯ ಇದ್ದರೂ ಅದಕ್ಕೆ ತೀರ್ಪನ್ನು ಕೊಡುತ್ತಾನೆ. ಯಾಕೆಂದರೆ ಉಲ್ಲಾಯ, ಕೊಡಮಣಿತ್ತಾಯ ದೈವಗಳು ಪಿಲಿಚಾಮುಂಡಿಗೆ ಆಯ-ನ್ಯಾಯದ ಅಧಿಕಾರವನ್ನು ನೀಡಿರುತ್ತದೆ. ಹುಲಿ ಚಾಮುಂಡಿಯು ಪ್ರಧಾನ ದೈವವಾಗಿ ಮೆರೆಯುತ್ತದೆ.
ಹುಲಿ ಚಾಮುಂಡಿಗೆ ನೇಮೋತ್ಸವ
ಬಂಡಿ ಮತ್ತು ತೂಟೆದಾರ
ಹುಲಿ ಚಾಮುಂಡಿ ಮರಂಕಂದಭಯ
ಹಿಂದೆ ಹುಲಿ ಚಾಮುಂಡಿ ದೈವದ ಬದಿಕರವು ಬೊಳ್ಳೊಳ್ಳಿಮಾರುಗುತ್ತಿಗೆ ಸಲ್ಲುತ್ತಿತ್ತು. ಎರಡು ಮರ್ಯಾದೆಯ ಮನೆ ಎಂದು ಗುರುತಿಸಲ್ಪಡುತ್ತಿದ್ದ ಬೊಳ್ಳೊಳ್ಳಿಮಾರಿಗೆ ಹುಲಿಚಾಮುಂಡಿಯ ಬದಿಕರವನ್ನು ಉಳಿಸಿಕೊಳ್ಳಲಾಗಲಿಲ್ಲ. ಆಗಿನ ಕಾಲದ ಬೊಳ್ಳೊಳ್ಳಿಮಾರಿನ ಯಜಮಾನರು ದುರ್ಬಲರಾಗಿದ್ದ ಕಾರಣ ನಂತರದ ವರ್ಷಗಳಲ್ಲೂ ಅದನ್ನು ಮತ್ತೆ ಪಡೆಯಲಾಗಲಿಲ್ಲ. ಬೊಳ್ಳೊಳ್ಳಿಮಾರುಗುತ್ತಿನ ಚಾವಡಿಗೆ ಬರಬೇಕಿದ್ದ ಹುಲಿ ಚಾಮುಂಡಿ ಬದಿಕರವು ಬಾರದೆ ಇರುವುದರಿಂದ ದೈವವು ಕುಟುಂಬಿಕರಲ್ಲಿ ಅತೃಪ್ತಿಯಾಗಿದ್ದಾನೆ ಎಂದು ಅಷ್ಟಮಂಗಳದಲ್ಲೂ ಕಂಡು ಬಂದಿತ್ತು. ಕಾಲ ಕೂಡಿ ಬಂದಾಗ ತಾನು ನೆಲೆಯೂರಿದ ಧರ್ಮದ ಮಣ್ಣಾದ ಬೊಳ್ಳೊಳ್ಳಿಮಾರುಗುತ್ತಿನ ಕುಟುಂಬಿಕರ ಭಕ್ತಿಗೆ ಶಕ್ತಿ ಒದಗಿ ಆ ಬದಿಕರವನ್ನು ಪಡೆಯುವ ಯೋಗ ಬರಲಿದೆ ಎಂದೂ ತೋರಿ ಬಂತು.
ಹುಲಿ ಚಾಮುಂಡಿ ದೈವವು ಊರ ಜನರಿಗೆ ಹಾಗೂ ದನಕರುಗಳಿಗೆ ಬರುವ ರೋಗ ರುಜಿನಗಳನ್ನು ದೂರ ಮಾಡಲು ಗಡುಪಾಡಿ ಸ್ಥಳಗಳಿಗೆ ಹೋಗಿ ಮಾರಿದೇವತೆಗೆ ರಕ್ತಾಹಾರವನ್ನು ನೀಡಿ ತೃಪ್ತಿಪಡಿಸುತ್ತದೆ. ಪೆರ್ಮುದೆ ಗ್ರಾಮಕ್ಕೆ ೪ ಗಡುಪಾಡಿ ಸ್ಥಳಗಳಿದ್ದು ಪಡ್ಡಾಯಿ ಕಾಯರ್ ಕಟ್ಟೆ, ಮುಡಾಯಿ ಕುಕ್ಕುದ ಕಟ್ಟೆ, ಬಡಕಾಯಿ ಭಟ್ರಗೋಳಿ, ತೆನ್ಕಾಯಿ ಥಾಕ್ಯಾರ್ ಕಟ್ಟೆ ಈ ಸ್ಥಳಗಳಲ್ಲಿ ಹಿಂದೆ ಹುಲಿಯ ಸಂಚಾರ ಕಾಣಸಿಗುತ್ತಿತ್ತು.
ಪಡ್ಡಾಯಿ ಕಾಯರ್ ಕಟ್ಟೆ
ಬಡಕಾಯಿ ಭಟ್ರಗೋಳಿ
ತೆನ್ಕಾಯಿ ಥಾಕ್ಯಾರ್ ಕಟ್ಟೆ
ಇಲ್ಲಿ ನಡೆಯುವ ನೇಮೋತ್ಸವಕ್ಕೆ ಬೊಳ್ಳೊಳ್ಳಿಮಾರು ಗುತ್ತು ಕುಟುಂಬದ ಪರವಾಗಿ ದೇಣಿಗೆಯನ್ನು ಕೊಡುತ್ತಾರೆ.
ದ್ಯೆವದ ಆಭರಣ ಪೆಟ್ಟಿಗೆ:
ಇಡೀ ಊರಿಗೆ ಸಂಬಂಧಪಟ್ಟ ದೈವದ ಆಭರಣ ಪೆಟ್ಟಿಗೆಯು ಬೊಳ್ಳೊಳ್ಳಿಮಾರು ಗುತ್ತಿ ನಲ್ಲಿದ್ದು ಪ್ರತಿ ನೇಮಗಳಿಗೆ ಕೊಂಡೊಯ್ಯುತ್ತಾರೆ. ಇದರಲ್ಲಿ
ತಲೆಕಿರೀಟ
ಎದೆಕವಚ
ಕಿವಿಓಲೆ
ಬಂಗಾರದ ಪಟ್ಟಿ
ಅಶ್ವತ್ಥದ ಮಾಲೆ
ತೋಳ ಸರಿಗೆ
ಕೈಗೆ ಕಟ್ಟುವ ಅಭರಣ
ಆಣಿಗೆ ಕಟ್ಟುವ ಬೆಳ್ಳಿಯ ಮುದ್ರೆ ಮತ್ತು ಬೆಳ್ಳಿಯ ಹೂವುಗಳಿವೆ.
ದ್ಯೆವದ ಆಭರಣ ಪೆಟ್ಟಿಗೆ

No comments:

Post a Comment