Saturday, February 27, 2010

ಊರಿನ ದೇವಸ್ಥಾನ

ಮಂಗಳೂರು ತಾಲೂಕು ಬಜಪೆಯಿಂದ ಕಟೀಲು ಕಡೆಗೆ ಹೋಗುವಾಗ ೩ ಕಿ.ಮೀ ದೂರದಲ್ಲಿರುವ ಪುಟ್ಟ ಊರು ಪೆರ್ಮುದೆ. ದಟ್ಟವಾದ ಕಾಡನ್ನು ಹಾಗೂ ಫಲವತ್ತಾದ ಬೈಲುಗದ್ದೆಗಳನ್ನು ಹೊಂದಿ ತೆಂಗು ಕಂಗು ಬಾಳೆ ತೋಟವನ್ನು ಹೊಂದಿ ಯಾವಾಗಲೂ ಹಚ್ಚಹಸುರಾಗಿರುವ ತಂಪು ಪ್ರದೇಶ. ತುಳುವಿನಲ್ಲಿ "ಪೇರ್ಗ್ ಪೆರ್ಪುಲ್ಲ ಸ್ಥಳ - ನೀರ್ಗ್ ನಿರ್ಪುಲ್ಲ ಸ್ಥಳ" ಅಂದರೆ ಹಾಲು ಕೇಳಿದರೆ ಹಾಲು ಕೊಡುವ ನೀರು ಕೇಳಿದರೆ ನೀರು ಕೊಡುವ ಸ್ಥಳ ಅರ್ಥಾತ್ ಸತ್ಯ, ಧರ್ಮ, ನ್ಯಾಯ, ನಿಷ್ಠೆ, ದೈವಭಕ್ತಿ, ದಾ, ಧರ್ಮ ಗುಣವನ್ನು ಹೊಂದಿರುವ ಜನರಿರುವ ಸ್ಥಳವೆಂದು ಗುರುತಿಸಲ್ಪಟ್ಟಿದೆ.
ಈ ಗ್ರಾಮಕ್ಕೆ ಗ್ರಾಮ ದೇವರು ಶ್ರೀ ಸೋಮನಾಥೇಶ್ವರ. ಈ ದೇವಸ್ಥಾನವನ್ನು ೧೩ನೇ ಶತಮಾನದಲ್ಲಿ ಭೃಗು ಮಹರ್ಷಿಯಿಂದ ಪ್ರತಿಷ್ಟಾಪಿಸಲ್ಪಟ್ಟಿತು. ಇಕ್ಕೇರಿ ಅರಸರ ಕಾಲದಲ್ಲಿ ಮಹಾದೇವ ದೇವಸ್ಥಾನ ಎಂದು ಕರೆಯಲ್ಪಡುತ್ತಿದ್ದ ಈ ದೇವಸ್ಥಾನವನ್ನು ಪುತ್ತಿಗೆ ಚೌಟರಸರ ಕಾಲದಲ್ಲಿ ಸೋಮನಾಥ ದೇವಸ್ಥಾನ ಎಂದು ಮರುನಾಮಕರಣ ಮಾಡಲಾಯಿತು.
ಶ್ರೀ ಸೋಮನಾಥೇಶ್ವರ ದೇವಸ್ಥಾನ
ಸೋಮನಾಥ ತನ್ನ ಹಿಂಭಾಗದಲ್ಲಿ ಎತ್ತರವಾದ ಗಿರಿ ಪ್ರದೇಶವನ್ನು ಹಾಗೂ ಮುಂಭಾಗದಲ್ಲಿ ತಂಪಾದ ನೀರು ಹಾಗೂ ಗದ್ದೆಯನ್ನು ಹೊಂದಿ ನಿತ್ಯ ಹರಿದ್ವರ್ಣವನ್ನು ಹೊಂದಿರುವ ಪ್ರದೇಶದಲ್ಲಿ ನೆಲೆಯಾಗಿದ್ದಾನೆ. ತುಳುವಿನ ಪುಯಿಂತೆಲ್ ತಿಂಗಳ ಹುಣ್ಣಿಮೆಯಂದು ಧ್ವಜಾರೋಹಣವಾಗಿ ೪ ದಿನಗಳ ಉತ್ಸವವನ್ನು ಶ್ರೀ ಸೋಮನಾಥ ಸ್ವೀಕರಿಸುತ್ತಾನೆ. ಉತ್ಸವದ ೪ನೇ ದಿನದಂದು ರಾತ್ರಿ ದೈವಗಳಿಗೆ ನೇಮೋತ್ಸವವು ನಡೆಯುತ್ತದೆ. ಜಾತ್ರಾ ಸಂದರ್ಭದಲ್ಲಿ ದೇವಳದ ಮುಂಭಾಗದ ಜಳಕದ ಕೆರೆಯಲ್ಲಿ ಜಳಕಗೈದು ದೇವಳದ ಅಂಗಳಕ್ಕೆ ಬಂದು ದೈವಗಳು ಭೇಟಿ ನೀಡುವ ದೃಶ್ಯ ನಯನ ಮನೋಹರ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಕಾಣಸಿಗದಿರುವ ವರ್ತುಲಾಕಾರದ ಗರ್ಭಗುಡಿಯನ್ನು ಹೊಂದಿ ತನ್ನ ಬಲಭಾಗದಲ್ಲಿ ಗಣಪತಿಯನ್ನು ಹಾಗೂ ಎಡಭಾಗದಲ್ಲಿ ವನದುರ್ಗೆಗೆ ಸ್ಥಾನ ಕಲ್ಪಿಸಿದ್ದಾನೆ. ಗರ್ಭಗುಡಿಯ ಮುಂಭಾಗದ ಗೊಪುರದ ಬಲಭಾಗದಲ್ಲಿ ಕ್ಷೇತ್ರ ರಕ್ಷಕನಾಗಿ ಧೂಮಾವತಿ ನೆಲೆಯಾಗಿದ್ದಾನೆ.
ದೇವಾಲಯದ ಮುಂಭಾಗದಲ್ಲಿ ಜಳಕದ ಕೆರೆಯನ್ನು ಹೊಂದಿರುವ ಸೋಮನಾಥನು ಆಸ್ತಿಕ ಭಕ್ತರ ಕಷ್ಟವನ್ನು ನಿವಾರಿಸಿ ಊರ ಪರವೂರ ಭಕ್ತಾದಿಗಳಿಂದ ಅನವರತ ಶತರುದ್ರಾಭಿಷೇಕ, ರಂಗಪೂಜೆ, ಹೂವಿನ ಪೂಜೆ, ಏಕದಶ ರುದ್ರಾಭಿಷೇಕ ರುದ್ರಾಭಿಷೇಕ, ಕಾರ್ತಿಪೂಜೆಯನ್ನು ಸ್ವೀಕರಿಸುವ ಪರಮೇಶ್ವರ ಭಕ್ತರ ಪಾಲಿಗೆ ಕಾಮಧೇನು.
ಜಳಕದ ಕೆರೆ
ಪೆರ್ಮುದೆ ಗ್ರಾಮದಲ್ಲಿ ಗ್ರಾಮದೇವತೆ ಸೋಮನಾಥನಂತೆ ಗ್ರಾಮದೈವಗಳಾಗಿ ಪಾರಾಳೆಗುತ್ತು ಬಂಟರ ಮನೆಯಲ್ಲಿ ನೆಲೆಯಾಗಿರುವ ಉಲ್ಲಾಯ ಕೊಡಮಣಿತ್ತಾಯ, ಕಾಂತೇರಿ ಧೂಮಾವತಿ, ಸರಳ ಧೂಮಾವತಿ ಹಾಗೂ ಜಾರಂದಾಯ ಮತ್ತು ಮುಕ್ಕೋಡಿ ಎನ್ನುವ ಬಿಲ್ಲವರ ಮನೆಯಲ್ಲಿ ಪಿಲಿಚಾಮುಂಡಿ ದೈವವು ನೆಲೆಯಾಗಿ ಸರ್ವ ಗ್ರಾಮಸ್ಥರ ಕಷ್ಟ ದುಃಖ ನಷ್ಟಗಳಿಗೆ ಕರೆದಾಗ ಓಗೊಟ್ಟು ಸಲಹುವ ಗ್ರಾಮದೈವಗಳಾಗಿವೆ.
ಗ್ರಾಮದಲ್ಲಿ ೮ ಗುತ್ತಿನ ಮನೆ (ಮರ್ಯಾದೆಯ ಮನೆಗಳು) ಗಳು ಇವೆ.
೧) ಪಾರಾಳ ಗುತ್ತು - ಇಲ್ಲಿನ ಯಜಮಾನ ಪಟ್ಟದ ಹೆಸರು "ಚೌಟ"
೨) ಮಾಗಂದಡಿ ಬೀಡು - ಇಲ್ಲಿನ ಯಜಮಾನ ಪಟ್ಟದ ಹೆಸರು "ಶೆಟ್ಟಿವಾಲ್"
೩) ಬೊಳ್ಳೊಳ್ಳಿಮಾರು ಗುತ್ತು - ಇಲ್ಲಿನ ಯಜಮಾನ ಪಟ್ಟದ ಹೆಸರು "ಮಾಡ"
೪) ಕೊಂಡೇಲ ಮನೆ - ಇಲ್ಲಿನ ಯಜಮಾನ ಪಟ್ಟದ ಹೆಸರು "ಕೊಂಡೆ"
೫) ಮೇಗಿನ ಮನೆ - ಇಲ್ಲಿನ ಯಜಮಾನ ಪಟ್ಟದ ಹೆಸರು "ಶೆಟ್ಟಿವಾಲ್"
೬) ಹೊಸಮನೆ - ಇಲ್ಲಿನ ಯಜಮಾನ ಪಟ್ಟದ ಹೆಸರು "ಭಂಡ್ರಿಯಾಲ್"
೭) ಕೊಕ್ಕಾರ್ - ಇಲ್ಲಿನ ಯಜಮಾನ ಪಟ್ಟದ ಹೆಸರು "ಮಲ್ಲಿವಾಲ್"
೮) ಹಳೆಮನೆ - ಇಲ್ಲಿನ ಯಜಮಾನ ಪಟ್ಟದ ಹೆಸರು "ಶೆಟ್ಟಿವಾಲ್"

No comments:

Post a Comment