Saturday, February 27, 2010

ದೈವ ಬಂದ ದಾರಿ

ಗುತ್ತಿನ ಗಡಿ ಬೂಲ್ಯವನ್ನು ಪಡೆಯಬೇಕೆಂದು ಮಂಜು ಪೂಂಜರು ಪುತ್ತೆ(ಪುತ್ತಿಗೆ)ಯ ಊರಿನ ಅರಸರಲ್ಲಿಗೆ ಹೋಗುತ್ತಾರೆ. ಯಾವ ಕಾರ್ಯಕ್ಕಾಗಿ ಬಂದಿರುವೆ ಎಂದು ಅರಸರು ಕೇಳುವಾಗ ಮಂಜು ಪೂಂಜರು ಒಂದು ಗುತ್ತಿನ ಗಡಿ ಬೂಲ್ಯವನ್ನು ಕೊಡಬೇಕೆಂದು ಕೇಳುತ್ತಾರೆ.
ಅದಕ್ಕೆ ಅರಸರು "ಏದೇಕಿ ನಡ್ಕ ಆಗಬಹುದಾ? ಕುಂದೋಡಿ ಬಾವ ಆಗಬಹುದಾ? ಅವನೊಚ್ಚಿ ಬರ್ಕೆ ಆಗಬಹುದಾ?" ಎಂದು ಕೇಳಿದಾಗ ಮಂಜು ಪೂಂಜರು "ಕೊಡುವುದಾದರೆ ತುಂಬೆ ಜಾಲ ಗುತ್ತಿನ ಗಡಿ ಬೂಲ್ಯ ಕೊಡಿ" ಎಂದು ಕೇಳುತ್ತಾರೆ.
ಒಂದು ತಿಂಗಳ ನಂತರ ಗಡಿ ಬೂಲ್ಯವನ್ನು ಪಡೆದ ಮಂಜು ಪೂಂಜರು ಸುಟ್ಟು ಹೋದ ಗುಡ್ಡದಂತ ಜಾಗವನ್ನು ದೈವ ದೇವರ ಕೃಪೆಯಿಂದ ಸಂಪತ್ತುಳ್ಳ ಸ್ಥಳವನ್ನಾಗಿ ಮಾಡಿದರು.
ಆದರೆ ಸ್ವಲ್ಪ ಸಮಯದಲ್ಲೆ ಊರಿನಲ್ಲಿ ಕಳ್ಳರ ಸಂಖ್ಯೆ ಜಾಸ್ತಿಯಾಯಿತು. ತಾನು ಬೆಳೆಸಿದ ಬೆಳೆಯನ್ನು ಕಳ್ಳರು ಕದ್ದುಕೊಂಡು ಹೋಗುತ್ತಿದ್ದರು. ಎಷ್ಟೇ ಪ್ರಯತ್ನ ಮಾಡಿದರೂ ಕಳ್ಳರ ಕಾಟವನ್ನು ತಪ್ಪಿಸಿಕೊಳ್ಳಲಾಗಲಿಲ್ಲ. ಮಂಜು ಪಂಜರಿಗೆ. ತಾನು ಬೆಳೆದ ಬೆಳೆಯನ್ನು ರಕ್ಷಿಸಬೇಕೆಂದು ಯೋಚಿಸಿದರು. ಅದಕ್ಕಾಗಿ ತಾನು ಬೆಳೆಸಿದ ಬೆಳೆಯ ಉಳಿವಿಗಾಗಿ ಬಾಳೊಳಿ ನಾಡಿಗೆ ಹೋಗಿ ತನ್ನ ಭಾವ ಬಾಳೊಳಿಯಲ್ಲಿ ದೈವವನ್ನು ಯಾಚಿಸಿದರು.
ಇದಕ್ಕೆ ಬಾಳೊಳಿಯು ಒಪ್ಪಿದಾಗ ಮಂಜುಪೂಂಜರು ಬಾಳೊಳಿಯ ಪ್ರೀತಿಯ ಕುಲ ದೈವವಾದ ಹುಲಿ ಚಾಮುಂಡಿಯನ್ನು ಕೇಳಿದರು. ಆದರೆ ಬಾಳೊಳಿಯು ಆ ದೈವವನ್ನು ಕೊಡಲು ನಿರಾಕರಿಸಿದಾಗ, ಮಂಜು ಪೂಂಜರು ಹಣದ ಆಮಿಷ ಒಡ್ಡಿದಾಗ ಬಾಳೊಳಿ ನಾಡಿನ ಬಾಳೊಳಿಯು ದೈವದ ಭಕ್ತಿ ಕಡಿಮೆ ಆಗಿ ಬಂಗಾರದ ಆಸೆಯು ಹೆಚ್ಚಾಗಿ ದೈವವನ್ನು ಕೊಡಲು ಒಪ್ಪಿದರು. ಅವರು ವೀಳ್ಯದೆಲೆಯಲ್ಲಿ ಹುಲಿ ಚಾಮುಂಡಿಯ ರೂಪ ಬರೆದು ಕೊಟ್ಟರು. ಬಂಗಾರದ ಪ್ರೀತಿಯೇ ಹೆಚ್ಚಾಗಿ ದೈವದ ಭಕ್ತಿ ಕಡಿಮೆ ಆದ ಬಾಳೊಳಿಯ ಸಂತಾನವನ್ನು ಹುಲಿ ಚಾಮುಂಡಿಯು ಅಳಿಸಿ ಮಂಜು ಪೂಂಜರೊಂದಿಗೆ ತುಂಬೆ ಮಜಾಲಗುತ್ತಿಗೆ ಬರುತ್ತದೆ. ತುಂಬೆ ಜಾಲಗುತ್ತಿನಲ್ಲಿ ಮಂಜುಪೂಂಜರು ದೈವಕ್ಕೆ ಚಾವಡಿಯನ್ನು ಕಟ್ಟಿಸುತ್ತಾರೆ.
ತುಂಬೆ ಜಾಲಗುತ್ತಿಗೆ ಬಂದಿರುವಂತಹ ಕಷ್ಟವನ್ನು ಪರಿಹರಿಸಿ ಸತ್ಯದ ದೈವ ಎಂದು ಹುಲಿ ಚಾಮುಂಡಿಯು ಹೇಳಿಸಿಕೊಂಡನು. ದೈವವು ಇಲ್ಲಿಂದ ಮುಂದುವರಿದು ತನಗೆ ಇನ್ನೊಂದು ಊರು ಬೇಕೆಂದು ಪೆರಾರದ ಊರಿಗೆ ಬಂತು. ಆ ಊರಿನಲ್ಲಿ ಅತೀ ಪ್ರಬಲವಾದ ಬಲವಾಂಡಿ ದೈವವು ಉಳಿದ ಯಾವ ದೈವಗಳಿಗೂ ಪೆರಾರ ಊರಿನಲ್ಲಿ ಅವಕಾಶ ಉಳಿಯಲು ಅವಕಾಶ ನೀಡುತ್ತಿರಲಿಲ್ಲ. ಆದರೆ ಹುಲಿ ಚಾಮುಂಡಿ ದೈವ ಪಟ್ಟುಬಿಡದೆ ತನಗೆ ಸ್ಥಾನ ನೀಡಬೇಕೆಂದು ಛಲ ಹಿಡಿಯಿತು. ಆಗ ಬಲವಾಂಡಿ ದೈವವು ಕರಾರನ್ನು ಹಾಕಿತು. ಸತ್ಯದ ದೈವ ಆಗಿ ನನ್ನ ರಾಜ್ಯಕ್ಕೆ ಬರಬೇಕೆಂಬ ಅಪೇಕ್ಷೆ ಇದ್ದರೆ
೧) ಪಾದೆಯ (ಪತ್ತ್) ಹಿಡಿತವನ್ನು ತೆಗೆ
೨) ಒನಕೆ (ಉಜ್ಜೆರ್)ನ ನಾರನ್ನು ತೆಗೆ
೩) ಸತ್ತು ಹೋದ ಮಗು (ಬಾಲೆ) ಸೇಮುದರನ್ನು ಜೀವ ಮಾಡಿಕೊಡು
೪) ನಿನ್ನ ಬಾಳೊಳಿ ನಾಡಿನ ಕೈಯ ಖಡ್ಗವನ್ನು (ಕರ್ಸಲೆ) ಮರಿ ಕೊಟ್ಟ ಅಂಗಳಕ್ಕೆ ಹಾಕು. ಹೀಗೆ ಮಾಡಿದರೆ ನಿನಗೆ ನನ್ನ ಊರಿನಲ್ಲಿ ಇರಲು ಅವಕಾಶ ಮಾಡಿಕೊಡುತ್ತೇನೆ ಎಂದಿತು ಬಲವಾಂಡಿ ದೈವ.
ಕ್ಷಣಾರ್ಧದಲ್ಲೇ ಹುಲಿ ಚಾಮುಂಡಿಯು ಪಾದೆಯ ಹಿಡಿತವನ್ನು ತೆಗೆಯಿತು, ಒನಕೆಯ (ಉಜ್ಜೆರಿನ) ನಾರನ್ನು ತೆಗೆಯಿತು, ಸೇಮುದರನ್ನು ಜೀವ ಮಾಡಿತು, ತನ್ನ ಕೈಯ ಖಡ್ಗ (ಕರ್ಸಲೆಯನ್ನು) ಮರಿಮುಟ್ಟ ಅಂಗನಕ್ಕೆ ಇಳಿಸಿತು. ಅಷ್ಟು ಹೊತ್ತಿಗೆ ತನ್ನಂತೆ ಪ್ರಬಲವಾದ ದೈವ ಎಂದು ಅರಿತ ಬಲವಾಂಡಿಯು ಮಾತಿನಂತೆ "ಒಂದು ದಿನದ ಎರಡು ನೇಮ ನಮಗೆ, ಒಂದು ದಿನದ ಒಂದು ನೇಮ ನಿನಗೆ, ಬಂಟನೇಮ ನಿನಗೆ, ಬಂಡಿ ನಿನಗೆ, ಹಾಕಿದ ಹರಕೆ ನಿನಗೆ, ಆಯ ನ್ಯಾಯ ನಿನಗೆ, ಗಡಿ ನುಡಿ ನಿನಗೆ" ಎಂದು ಹೇಳಿತು.
ಹೀಗೆ ಪೆರಾರದಲ್ಲಿ ಸತ್ಯದ ದೈವ ಎಂದು ಮೆರೆಯುತ್ತ ಬಂದ ಹುಲಿಚಾಮುಂಡಿಯು ಇನ್ನೂ ಸತ್ಯದ ರಾಜ್ಯ ಬೇಕು ಎಂದು ಪರರ ಊರಿಂದ ಮುಂದುವರಿದು, ಬಲದಲ್ಲಿ ಬ್ರಹ್ಮರನ್ನು ಹಾಗೂ ಎಡದಲ್ಲಿ ಬ್ರಹ್ಮನ್ ದೇವತೆಯನ್ನು ಇರಿಸಿ ಪಶ್ಚಿಮ (ಪಡ್ಡಾಯಿ) ಸಮುದ್ರ ಸ್ನಾನ ಮಾಡಲು ಬಂದಾಗ ಭಟ್ರಗೋಳಿಯಲ್ಲಿ ಬ್ರಹ್ಮರನ್ನು ನಿಲ್ಲಿಸುತ್ತಾನೆ.

ಭಟ್ರಗೋಳಿ ಬ್ರಹ್ಮಸ್ಥಾನ
ಅಲ್ಲಿಂದ ಮುಂದುವರಿದು ಸಮುದ್ರ ಸ್ನಾನ ಮಾಡಿ ಕಾಯರ್ ಕಟ್ಟೆಗೆ ಬಂದಾಗ ಹಾಲಿಗೆ ಹಾಲಿರುವಂತಹ ನೀರಿಗೆ ನೀರಿರುವಂತಹ ಪೆರ್ಮುದೆ ಗ್ರಾಮ ಕಣ್ಣಿಗೆ ಗೋಚರಿಸಿತು.

ಪೆರ್ಮುದೆ ಗ್ರಾಮ


ಅಲ್ಲಿಂದ ದೈವವು ಒಂದು ಹೆಜ್ಜೆಯನ್ನು ತ್ಯಾಂಪರ ಪಾದೆಗೆ ಇಟ್ಟಿತು. ಆ ಹೊತ್ತಿಗೆ ದೊಡ್ಡದಾದ ಹೆಬ್ಬಾವು ಇಡೀ ಪೆರ್ಮುದೆ ಊರನ್ನು ನುಂಗಲು ಬಂದಾಗ ಹುಲಿಚಾಮುಂಡಿ ತನ್ನ ಆಯುಧದಿಂದ ಆ ಹಾವನ್ನು ಕೊಚ್ಚಿ ಕೊಚ್ಚಿ ಹಾಕಿತು.

ತ್ಯಾಂಪರ ಪಾದೆ


ಈಗಲೂ ಸಹ ಆ ಪಾದೆಯಲ್ಲಿ ಕೊಚ್ಚಿದ ಗುರುತುಗಳಿವೆ. ಅಲ್ಲಿ ಸೋಮನಾಥ ದೇವರ ಒಪ್ಪಿಗೆ ಪಡೆದು ನೆಲೆಯಾಗಲು ತನ್ನ ಒಂದು ಹೆಜ್ಜೆಯನ್ನು ಬೊಳ್ಳೊಳ್ಳಿಮಾರುಗುತ್ತಿನ ಮಂಜಪ್ಪ ಬಾಕ್ಯಾರ್ ಗದ್ದೆಯ ಮಂಜಪ್ಪ ಪಾದೆಗೆ ಇರಿಸಿತು.

ಮಂಜಪ್ಪ ಬಾಕ್ಯಾರು


ಮಂಜಪ್ಪ ಪಾದೆ


ಆ ಹೊತ್ತಿಗೆ ಮಾಯೆಯಿಂದ ತಾನು ಬಂದ ವಿಷಯ ಮನೆಯವರಿಗೆ ತಿಳಿಯುವುದಕ್ಕಾಗಿ, ತೊಟ್ಟಿಲಿನ ಮಗುವಿಗೆ ಕಾಯಿಲೆ, ಹಟ್ಟಿಯ ದನಕರುಗಳಿಗೆ ಕಾಯಿಲೆ ಕಾಣಿಸಿತು. ಜೋತಿಷ್ಯರಲ್ಲಿ ಕೇಳಿದಾಗ ಹುಲಿಚಾಮುಂಡಿ ದೈವ ಬಂದಿದೆ. ಅದಕ್ಕೆ ಹಾಗೂ ಬ್ರಹ್ಮನ್ ದೇವತೆಗೆ ಸಾನ ಕಟ್ಟಿಸಿ ನಂಬಬೇಕೆಂದು ಕಾಣಿಸಿತು.
ಅಂತೆಯೇ, ಬೊಳ್ಳೊಳ್ಳಿಮಾರಿನಲ್ಲಿ ೭ ಅಡಿ ಉದ್ದದ ಸಾನ ಹುಲಿಚಾಮುಂಡಿಗೂ, ೭ ಅಡಿ ಎತ್ತರದ ಪಚ್ಚೋಲಿ ಮಾಡಿನ ಸಾನವನ್ನು ದೇವತೆಗೆ ಕಟ್ಟಿಸಿದರು.

ಬೊಳ್ಳೊಳ್ಳಿಮಾರು ಗುತ್ತು ಹುಲಿಚಾಮುಂಡಿ ಹಾಗೂ ಬ್ರಹ್ಮನ್ ದೇವತೆ ಸಾನ

ಸತ್ಯದ ದೈವ ಹುಲಿಚಾಮುಂಡಿಗೆ ಬೊಳ್ಳೊಳ್ಳಿಮಾರು ಗುತ್ತಿನಲ್ಲಿ ಹಾಳೆಯ ಮುಖ ಮಾಡಿ ವಿಜೃಂಭಣೆಯಿಂದ ಧರ್ಮ ನೇಮವನ್ನು ಕೊಟ್ಟರು.
ಈ ನೇಮವನ್ನು ನೋಡಲೆಂದು ಬಂದಿರುವ ಮುಕ್ಕೋಡಿ ಮನೆಯ ದೂಮ ಎಂಬ ಅಲ್ಲಿಯ ಯಜಮಾನ ಪ್ರಸಾದವನ್ನು ಸ್ವೀಕರಿಸುವಾಗ ದೆವವು ಮುಕ್ಕೋಡಿ ದೂಮನಲ್ಲಿ ನಾನು ನಿನ್ನೊಂದಿಗೆ ಬರುವೆ. ನಾನು ಬೊಳ್ಳೊಳ್ಳಿ ಮಾರು ಗುತ್ತಿನಲ್ಲಿಯೇ ಉಳಿದರೆ ಅವರ ಮನೆ ದೈವವಾಗುತ್ತೇನೆ. ನಾನು ರಾಜ್ಯದ ದೈವ ಆಗಬೇಕು ಅದ್ದರಿಂದ ನಿನ್ನ ಮನೆಯಲ್ಲಿ ನನ್ನನ್ನು ನಂಬಿ ಸ್ಥಾನ ಕಟ್ಟಿಸಿ ನಿನ್ನ ಮನೆಯ ನನಗೊಂದು ಮಾಣಿ (ಪಾತ್ರಿ) ಬೇಕೆಂದು ಕೇಳಿತು. ಆತ ಸಂತೋಷವಾಗಿ ಒಪ್ಪಿದ. ದೈವವು ಆತನೊಂದಿಗೆ ಹೊರಟಿತು. ತನ್ನ ಒಂದು ಪಾದವನ್ನು ಮಂಜೊಟ್ಟಿ ಪಾದೆಗೆ ಇಟ್ಟಿತು.

ಮಂಜೊಟ್ಟಿ ಪಾದೆ

ಇನ್ನೊಂದು ಪಾದವನ್ನು ಕಲ್ಲಂಡ ಪಾದೆಗೆ ಇಟ್ಟು ಮುಕ್ಕೊಡಿ ಪ್ರವೇಶಿಸಿತು. ಮುಕ್ಕೋಡಿಯಲ್ಲಿ ವಳ ಗುಡ್ಡ ಸಾನವನ್ನು ಗ್ರಾಮಸ್ಥರಿಂದ ನಿರ್ಮಿಸಿ ಅಲ್ಲೂ ಕಾಲಾವಧಿ ಸೇವೆಯನ್ನು ಸ್ವೀಕರಿಸಿ ಗ್ರಾಮ ದೈವವಾಗಿ ನೆಲೆಯಾಯಿತು.

ಮುಕ್ಕೋಡಿ ವಳ ಗುಡ್ಡ ಸಾನ

ಪಾರಾಳೆಗುತ್ತು ಪಾಲೆದಡಿ ಸಾನದಲ್ಲಿ ಹುಲಿಚಾಮುಂಡಿ ದೈವ ಬರುವುದಕ್ಕೆ ಮುಂಚೆ ಆ ದೈವಗಳಿಗೆ ನೇಮವಾಗುತ್ತಿತ್ತು. ಆ ಹೊತ್ತಿಗೆ ಪಿಲಿಚಾಮುಂಡಿ ದೈವವು ಪಾಲೆಯ ಮರದಲ್ಲಿ ಬಂದು ಉಳಿದ ದೈವಗಳಿಗೆ ನೇಮವಾಗುವಾಗ ನೇಮಕ್ಕೆ ಉರಿಸಿದ ದೀಪವನ್ನು ನಂದಿಸಿತು. ಕಾರಣವೇನೆಂದು ಕೇಳಿದಾಗ ಉಳಿದ ದೈವಗಳು ಹುಲಿಚಾಮುಂಡಿ ದೈವ ತನಗೂ ಸಹ ಇಲ್ಲಿ ನೇಮ ಕೊಡಬೇಕೆಂದು ಕೇಳುತಿದೆ ಎಂದರಿತು ಅದಕ್ಕೆ ಕೊನೆಯ ತಮ್ಮಣದ ದೊಚ್ಚಿ (ಔತಣದ ಊಟ) ನೇಮ ಕೊಡಲು ನಿರ್ಧರಿಸಿ ಅಲ್ಲಿಂದ ಪಾಲೆದಡಿ ಸಾನದಲ್ಲಿ ಪಿಲಿಚಾಮುಂಡಿ ದೈವಕ್ಕೆ ಕೊನೆಯ ನೇಮವು ಶಾಶ್ವತವಾಯ್ತು.
ಬೊಳ್ಳೊಳ್ಳಿಮಾರು ಗುತ್ತಿನಿಂದ ಹುಲಿ ಚಾಮುಂಡಿಯು ಗ್ರಾಮದ ದ್ಯೆವ ಆಗುವ ಉದ್ದೇಶದಿಂದ ಹೊರಡುವ ವೇಳೆ, ದೇವತೆಯು "ನನಗೇನಿದೆ" ಎಂದು ಕೇಳಿದಾಗ ಚಾಮುಂಡಿಯು ನನ್ನ ಒಂದು ದಿವಸದ ನೇಮದಂದು ಮೂರು ಸುತ್ತು ಬಳಿ ನಿನಗೆ" ಎಂದಿತ್ತು. ಅದರಂತೆ ಮೂರು ಸುತ್ತು ಬಳಿ ದೇವತೆಗೂ ವಿಜ್ರಂಭಣೆಯಿಂದ ನಡೆಯುತ್ತದೆ.

ಪಾಲೆದಡಿ ಸಾನ

ಬೊಳ್ಳೊಳ್ಳಿಮಾರಿನಲ್ಲಿ ಹುಲಿಚಾಮುಂಡಿ ದೈವದ ದರ್ಶನ ಮಾಡುವುದಾದರೆ ಕೈಯಲ್ಲಿ ಹಿಂಗಾರದ ಹಾಳೆಯನ್ನು ಕೊಟ್ಟು ದರ್ಶನ ಬರಿಸುವ ಕ್ರಮ ಇದೆ.
ಹುಲಿಚಾಮುಂಡಿಗೆ ಬೊಳ್ಳೊಳ್ಳಿಮಾರು ಗುತ್ತು ಪಾದ ಮಂಜೊಟ್ಟಿ ಬಾಳಿಕೆ ಎದೆ ಮುಕ್ಕೊಡಿ ತಲೆಯಾಗಿದೆ. ಹುಲಿಚಾಮುಂಡಿಗೆ ಮುಕ್ಕೋಡಿಗಿಂತಲೂ ಬೊಳ್ಳೊಳ್ಳಿಮಾರು ಗುತ್ತು ಪ್ರಧಾನ ಮನೆಯೆಂದು ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡು ಬಂದಿತ್ತು.
ಹಿಂದಿನ ಕಾಲದಿಂದಲೂ ಹುಲಿ ಚಾಮುಂಡಿ ಪಾತ್ರಿಗಳು ನೇಮದಲ್ಲಿ ಗುತ್ತುಗಳ ಯಜಮಾನರನ್ನು ಕರೆಯುವಾಗ ಮಾಡರನ್ನು "ಮಾಡೆರೇ" ಎಂದು ದೊಡ್ಡ ದನಿಯಲ್ಲಿ ಕರೆದು ಬೊಳ್ಳೊಳ್ಳಿಮಾರಿಗೂ ಹುಲಿ ಚಾಮುಂಡಿ ದೈವಕ್ಕೂ ಇರುವ ಸಂಬಂಧವನ್ನು ತೋರಿಸುತ್ತಿದ್ದರು.
ಮನೆಯ ಈಶಾನ್ಯ ಭಾಗದಲ್ಲಿರುವ ಮಂಜಪ್ಪ ಬಾಕ್ಯರ್ ಗದ್ದೆ ಪಿಲಿ ಚಾಮುಂಡಿ ಪಾದವಿರಿಸಿದ ಸ್ಥಳ. ಈ ಗದ್ದೆಯಲ್ಲಿ ಚಪ್ಪರ ಬಲಿ ನೇಮ ದೊಂಪದ ಬಲಿ ಆಗುವ ಕಾರಣ ಇಲ್ಲಿ ತರಕಾರಿ ಮಾಡುವುದಕ್ಕೂ ಚಪ್ಪರ ಹಾಕಬಾರದು.
ಹುಲಿ ಚಾಮುಂಡಿ ಸಾನದ ಎಡಭಾಗದಲ್ಲಿ ಬ್ರಹ್ಮನ್ ದೇವತೆಯ ಸಾನವಿದೆ. ಇದು ಏಳು ಅಡಿ ಎತ್ತರವಿದ್ದು ಪಚ್ಚೋಲಿ ಮಾಡವನ್ನು ಹೊಂದಿದೆ. ೧೯೮೭ರಲ್ಲಿ ಬ್ರಹ್ಮನ್ ದೇವತೆಗೆ ಹೊಸದಾಗಿ ಸಾನವನ್ನು ಕಟ್ಟಲಾಯಿತು.
ಬ್ರಹ್ಮನ್ ದೇವತೆ
ಬೊಳ್ಳೊಳ್ಳಿಮಾರು ಗುತ್ತಿನ ಹಿರಿಯರ ತಿಳುವಳಿಕೆಯ ಪ್ರಕಾರ ಒಂದು ಚಪ್ಪರ ಬಲಿನೇಮವು ಮಂಜಪ್ಪ ಬಾಕೂರಲ್ಲಿ ನಡೆದಿತ್ತು. ಇದು ಹರಕೆಯ ಚಪ್ಪರ ಬಲಿನೇಮವಾಗಿತ್ತು. ಸಿದ್ಧಣ್ಣ ಮಾಡರಿಗೆ ಹಲವು ವರ್ಷ ಮಕ್ಕಳಾಗದೆ ಇದ್ದಾಗ ಮಕ್ಕಳಾದರೆ ಚಪ್ಪರ ಬಲಿನೇಮ ಕೊಡುವುದಾಗಿ ಹರಕೆ ಹೇಳಿದರು. ಆದರೆ ಹರಕೆಯನ್ನು ಅವರಿಂದ ಸಲ್ಲಿಸಲಾಗಲಿಲ್ಲ. ಅವರ ನಂತರ ಅವರ ಅಳಿಯ ಆ ಸೇವೆಯನ್ನು ಒಪ್ಪಿಸಿದರು.
೧೯೮೭ರಲ್ಲಿ ಬ್ರಹ್ಮನ್ ದೇವತೆಗೆ ಹೊಸದಾಗಿ ಸಾನ ಕಟ್ಟಿಸಿ ಕಾಂತೇರಿ ಧೂಮಾವತಿ ಹಾಗೂ ಪಿಲಿಚಾಮುಂಡಿಗೆ ದರ್ಶನ ಮಾಡಿಸಿದಾಗ ದೈವವು "ತಾನು ಬೊಳ್ಳೊಳ್ಳಿಮಾರು ಗುತ್ತಿನಲ್ಲಿ ಸೇವೆಯನ್ನು ಸಂತೋಷವಾಗಿ ಸ್ವೀಕರಿಸಲಿಲ್ಲ. ಆದ್ದರಿಂದ ನಮಗೆ ಬೇರೆಯೇ ನೇಮ ಕೊಡಬೇಕೆಂದು" ಕೇಳಿತ್ತು. ಕಾರಣ ಸೇವೆ ನಡೆಯುವ ಹೊತ್ತು ಬೊಳ್ಳೊಳ್ಳಿ ಮಾರುಗುತ್ತಿನ ಕುಟುಂಬಿಕರು ಆಮೆಂii ಕಾರಣ ದೂರವೇ ನಿಂತಿದ್ದರು. ಆ ಕಾರಣಕ್ಕಾಗಿ ೮-೨-೨೦೦೦ ಹಾಗೂ ೯-೨-೨೦೦೦ದಂದು ವಿಜೃಂಭಣೆಯಿಂದ ಧರ್ಮನೇಮ ನಡೆಸಲಾಯಿತು.
ಪಿಲಿಚಾಮುಂಡಿ ಸಾನದ ಎಡಭಾಗದಲ್ಲಿ ಕಡಲ್ತಾಯ ಪಂಜುರ್ಲಿಯ ಸಾನಿಧ್ಯವಿದೆ. ಇದು ಅನಾದಿಯ ಕುಟುಂಬದ ದೈವದಲ್ಲಿ ಎಷ್ಟೇ ತಲೆಮಾರುಗಳ ಹಿಂದೆ ಮುಕ್ಕೋಡಿಯಲ್ಲಿ ನಡೆಯುವ ನೇಮಕ್ಕೆ ಹೋದವರು ರಾತ್ರಿ ಹಿಂದೆ ಬರುವಾಗ ನೇಗಿಲಿಗಾಗಿ ಮುಕ್ಕೋಡಿಯಿಂದ ಒಂದು ತುಂಡು ಮರವನ್ನು ತಂದಿದ್ದರಂತೆ ಆ ಮರದ ತುಂಡಿನ ಒಟ್ಟಿಗೆ ಮುಕ್ಕೋಡಿಯಲ್ಲಿದ್ದ ಕಡಲ್ತಾಯ ಪಂಜುರ್ಲಿ ಬಂದು ಪಿಲಿ ಚಾಮುಂಡಿಯ ಎಡ ಭಾಗದಲ್ಲಿರುತ್ತೇನೆ ನನಗೊಂದು ಸಾನ ಕಟ್ಟಿಸಬೇಕೆಂದು ಕೇಳಿತು.
ಮೊದಲು ಮಣ್ಣಿನಿಂದ ಕಟ್ಟಿದ ಈ ಸಾನ ೨೦೦೩ ರಲ್ಲಿ ಆಯ ಪ್ರಮಾಣ ಪ್ರಕಾರ ಹೊಸದಾಗಿ ಕಟ್ಟಲಾಯ್ತು.
ಕಡಲ್ತಾಯ ಪಂಜುರ್ಲಿ
ಮನೆಯ ನೈಋತ್ಯ ಭಾಗದಲ್ಲಿ ವರ್ತೆ ಪಂಜರ್ಲಿ ಹಾಗೂ ಜಾಗದ ಪಂಜುರ್ಲಿ ದೈವದ ಸಾನಿಧ್ಯಗಳಿವೆ. ಆದಿಯಲ್ಲಿ ಇದಕ್ಕೆ ಮುಳಿಹುಲ್ಲಿನ ಸಾನವಿತ್ತಂತೆ. ಅನಂತರ ಇದು ಗಾಳಿ ಮಳೆಗೆ ಬಿದ್ದು ಹೋಯ್ತು. ಅನಂತರ ಅಲ್ಲಿ ಬರೀ ಕಲ್ಲುಗಳಿಗೆ ಆರಾಧನೆ ಮಾಡಲಾಗುತ್ತಿತ್ತು. ೨೦೦೦ ಇಸವಿಯಲ್ಲಿ ಈ ದೈವಗಳಿಗೂ ಸಾನ ಕಟ್ಟಿಸಲಾಯಿತು.
ವರ್ತೆ ಪಂಜರ್ಲಿ ಹಾಗೂ ಜಾಗದ ಪಂಜುರ್ಲಿ
ಮನೆಯ ವಾಯುವ್ಯ ಮೂಲೆಯಲ್ಲಿ ರಾಹು ದೈವದ ಸಾನಿಧ್ಯವಿದೆ.

ರಾಹು ಪೀಠ

No comments:

Post a Comment